ಪ್ಯಾಕೆಟ್ ಗಳ ಮೇಲೆ ಫಂಗಸ್, ಅವಧಿ ಮೀರಿದ ಉತ್ಪನ್ನಗಳು: ಜೆಪ್ಟೋದ ಗೋದಾಮು ಪರವಾನಿಗೆ ಅಮಾನತು

Photo : ndtv
ಮುಂಬೈ: ಆಹಾರ ಸಾಮಗ್ರಿಗಳ ಮೇಲಿನ ಫಂಗಸ್ ಅಥವಾ ಶಿಲೀಂಧ್ರಗಳು,ಅವಧಿ ಮೀರಿದ ಉತ್ಪನ್ನಗಳು,ತೇವ ಮತ್ತು ಅವ್ಯವಸ್ಥೆಯಿಂದ ಕೂಡಿದ ನೈರ್ಮಲ್ಯರಹಿತ ಶೇಖರಣಾ ಸ್ಥಿತಿ; ಇವು ಇಲ್ಲಿಯ ಧಾರಾವಿಯಲ್ಲಿನ ಆನ್ಲೈನ್ ದಿನಸಿ ವಿತರಣೆ ವೇದಿಕೆ ಜೆಪ್ಟೋದ ಗೋದಾಮಿಗೆ ಭೇಟಿ ನೀಡಿದ್ದ ಮಹಾರಾಷ್ಟ್ರ ಆಹಾರ ಮತ್ತು ಔಷಧಿ ಆಡಳಿತ(ಎಫ್ಡಿಎ) ತಂಡವನ್ನು ಸ್ವಾಗತಿಸಿದ್ದವು. ಗಂಭೀರ ಅಕ್ರಮಗಳು ಹಾಗೂ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆಯ ಉಲ್ಲಂಘನೆಯನ್ನು ಗಮನಿಸಿದ ಎಫ್ಡಿಎ ಜೆಪ್ಟೋ ಪ್ರೈ.ಲಿ.ನ ಆಹಾರ ಉದ್ಯಮ ಪರವಾನಿಗೆಯನ್ನು ಅಮಾನತುಗೊಳಿಸಿದೆ.
‘ಜೆಪ್ಟೋದಲ್ಲಿ ಆಹಾರ ಸುರಕ್ಷತೆ ಮತ್ತು ನೈರ್ಮಲ್ಯದ ಅತ್ಯುತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳುವುದರಲ್ಲಿ ಯಾವುದೇ ಚೌಕಾಶಿಯಲ್ಲ. ನಾವು ಈಗಾಗಲೇ ಆಂತರಿಕ ಪರಿಶೀಲನೆಯನ್ನು ಆರಂಭಿಸಿದ್ದೇವೆ ಹಾಗೂ ಸಂಪೂರ್ಣ ಮತ್ತು ತ್ವರಿತ ಅನುಸರಣೆಯನ್ನು ಖಚಿತಪಡಿಸಲು ಸಂಬಂಧಿಸಿದ ಅಧಿಕಾರಿಗಳೊಂದಿಗೆ ನಿಕಟವಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಗುರುತಿಸಲಾದ ಲೋಪಗಳನ್ನು ತಿದ್ದಿಕೊಳ್ಳಲು ಹಾಗೂ ನಮ್ಮ ಗ್ರಾಹಕರಿಗೆ ಅತ್ಯುತ್ತಮ ಮತ್ತು ಸುರಕ್ಷಿತ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸಲು ನಮ್ಮ ಕಾರ್ಯವಿಧಾನವನ್ನು ಬಲಗೊಳಿಸಲು ನಾವು ಬದ್ಧರಾಗಿದ್ದೇವೆ. ನಿಯಂತ್ರಕ ಬಾಧ್ಯತೆಗಳು ಮತ್ತು ಅನ್ವಯವಾಗುವ ಕಾನೂನುಗಳಿಗೆ ಅನುಗುಣವಾಗಿ ಸಾಧ್ಯವಾದಷ್ಟು ಶೀಘ್ರ ಪುನರಾರಂಭಿಸಲು ನಾವು ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ’ ಎಂದು ಜೆಪ್ಟೋ ಹೇಳಿಕೆಯಲ್ಲಿ ತಿಳಿಸಿದೆ.
ಜೆಪ್ಟೋದಂತಹ ಆನ್ಲೈನ್ ದಿನಸಿ ವಿತರಣೆ ವೇದಿಕೆಗಳು ಒಂದೇ ಟ್ಯಾಪ್ ನಲ್ಲಿ ತ್ವರಿತವಾಗಿ,ಕೆಲವೊಮ್ಮೆ ಹತ್ತೇ ನಿಮಿಷಗಳಲ್ಲಿ ಉತ್ಪನ್ನಗಳನ್ನು ಪೂರೈಸುವ ಮೂಲಕ ಜೀವನವನ್ನು ಸುಲಭವಾಗಿಸಿವೆ. ಆದರೆ ಧಾರಾವಿಯಲ್ಲಿನ ಜೆಪ್ಟೋದ ಗೋದಾಮಿನಲ್ಲಿಯ ನೈರ್ಮಲ್ಯರಹಿತ ಶೇಖರಣಾ ವ್ಯವಸ್ಥೆಯು ಉತ್ಪನ್ನಗಳ ಸುರಕ್ಷತೆ ಮತ್ತು ಗ್ರಾಹಕರ ಆರೋಗ್ಯದ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಆಹಾರ ಮತ್ತು ಔಷಧಿ ಆಡಳಿತ ರಾಜ್ಯಸಚಿವ ಯೋಗೇಶ ಕದಂ ಅವರಿಂದ ಪಡೆದಿದ್ದ ಮಾಹಿತಿಯ ಆಧಾರದಲ್ಲಿ ಎಫ್ಡಿಎ ಜೆಪ್ಟೋದ ಗೋದಾಮಿನ ತಪಾಸಣೆಯನ್ನು ನಡೆಸಿದ್ದು,ಗಂಭೀರ ಉಲ್ಲಂಘನೆಗಳನ್ನು ಪತ್ತೆ ಹಚ್ಚಿದೆ.
ಕಳೆದ ಕೆಲವು ತಿಂಗಳುಗಳಿಂದ ಜೆಪ್ಟೋ ವಿವಾದಗಳ ಸುಳಿಯಲ್ಲಿ ಸಿಲುಕಿದೆ. ನಗರದಾದ್ಯಂತ ವಿವಿಧ ಗೋದಾಮುಗಳ ವೀಡಿಯೊಗಳು ಕೊಳಕು ಮತ್ತು ಶೇಖರಣಾ ಸ್ಥಿತಿಯ ಬಗ್ಗೆ ಬೆಳಕು ಚೆಲ್ಲುವ ಮೂಲಕ ವೈರಲ್ ಆಗಿವೆ.







