VB-G RAM G ಮಸೂದೆ ಗ್ರಾಮೀಣ ಕಾರ್ಮಿಕರು, ರೈತ ಕುಟುಂಬಗಳಿಗೆ ದ್ರೋಹ ಮಾಡುತ್ತದೆ: ಸಂಯುಕ್ತ ಕಿಸಾನ್ ಮೋರ್ಚಾ

File Photo: PTI
ಹೊಸದಿಲ್ಲಿ: VB-G RAM G ಮಸೂದೆ ಗ್ರಾಮೀಣ ಕಾರ್ಮಿಕರು ಮತ್ತು ರೈತ ಕುಟುಂಬಗಳಿಗೆ ದ್ರೋಹ ಬಗೆಯುತ್ತದೆ ಮತ್ತು MGNREGA ಮೂಲಕ ಖಾತರಿಪಡಿಸಲಾದ ಉದ್ಯೋಗದ ಶಾಸನಬದ್ಧ ಹಕ್ಕನ್ನು ಕಸಿದುಕೊಳ್ಳುತ್ತದೆ. ಇದು "ಅತ್ಯಂತ ಕೆಟ್ಟ ಶಾಸನʼ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ.
MGNREGA ರದ್ದುಗೊಳಿಸುವ ಬದಲು, ತೀವ್ರ ನಗರ ನಿರುದ್ಯೋಗವನ್ನು ಪರಿಹರಿಸಲು ಮತ್ತು ಉದ್ಯೋಗವನ್ನು ಶಾಸನಬದ್ಧ ಹಕ್ಕನ್ನಾಗಿ ಮಾಡಲು ಕೇಂದ್ರ ಸರಕಾರ ಇದೇ ರೀತಿಯ ಕಾನೂನನ್ನು ಜಾರಿಗೆ ತರಬೇಕು ಎಂದು ರೈತ ಸಂಘಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ.
ವಿಕಸಿತ್ ಭಾರತ್-ರೋಜ್ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಮಸೂದೆ 2025 ( VB–G RAM G ಮಸೂದೆ) ಮಂಗಳವಾರ ಲೋಕಸಭೆಯಲ್ಲಿ ಪರಿಚಯಿಸಲಾಯಿತು. ಇದು ಪ್ರತಿ ಹಣಕಾಸು ವರ್ಷದಲ್ಲಿ 125 ದಿನಗಳ ಕೂಲಿ ಉದ್ಯೋಗವನ್ನು ಒದಗಿಸುತ್ತದೆ.
"ರೋಜ್ಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ) ಮಸೂದೆಯು ಗ್ರಾಮೀಣ ಕಾರ್ಮಿಕರು ಮತ್ತು ರೈತ ಕುಟುಂಬಗಳಿಗೆ ದ್ರೋಹ ಬಗೆದ ಅತ್ಯಂತ ಕೆಟ್ಟ ಶಾಸನವಾಗಿದ್ದು, MGNREGA ನಿಂದ ಖಾತರಿಪಡಿಸಲಾದ ಅವರ ಶಾಸನಬದ್ಧ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳುತ್ತದೆ. ಆದ್ದರಿಂದ ಇದು ಸ್ವೀಕಾರಾರ್ಹವಲ್ಲ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ.
"MNREGA ಕೇವಲ ಗ್ರಾಮೀಣ ಜನರಿಗೆ ಉದ್ಯೋಗ ಖಾತರಿ ನೀಡುವ ಕಾಯ್ದೆಯಾಗಿರಲಿಲ್ಲ. ಗ್ರಾಮೀಣ ರಸ್ತೆಗಳು, ನೀರಾವರಿ, ಕುಡಿಯುವ ನೀರು, ಪಶುಸಂಗೋಪನೆ, ನಾಗರಿಕ ಸೌಲಭ್ಯಗಳು, ಜನಪರ ವಿದ್ಯುದೀಕರಣ, ಕೃಷಿ ಸಂಸ್ಕರಣೆ ಇತ್ಯಾದಿಗಳಿಗೆ ಸಂಬಂಧಿಸಿದ ಗ್ರಾಮೀಣ ಅಭಿವೃದ್ಧಿ ಮೂಲಸೌಕರ್ಯಗಳನ್ನು ರಚಿಸುವ ಬೇಡಿಕೆ ಆಧಾರಿತ ಕಾರ್ಯಕ್ರಮವಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. ದೊಡ್ಡ ಕಂಪೆನಿಗಳ ಅಗತ್ಯಗಳಿಗೆ ಸಂಬಂಧಿಸಿದ ಸರಕಾರಿ ಹೂಡಿಕೆ ಚಾಲಿತ ಕಾರ್ಯಕ್ರಮವನ್ನಾಗಿ ಮಾಡುವ ಮೂಲಕ ಇವೆಲ್ಲವನ್ನೂ ಅಲ್ಪಾವಧಿಗೆ ಇಳಿಸಲಾಗಿದೆ" ಎಂದು ಎಸ್ಕೆಎಂ ಹೇಳಿದೆ.
MGNREGA ರದ್ದತಿಯಿಂದ ಮಹಿಳಾ ಕಾರ್ಮಿಕರ ಮೇಲೆ ಪರಿಣಾಮವನ್ನು ಬೀರಲಿದೆ. ಅದೇ ರೀತಿ VB–G RAM G ದಲಿತರು ಮತ್ತು ಆದಿವಾಸಿಗಳ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. MGNREGA ರದ್ದತಿಯಿಂದ ಸ್ಥಳೀಯ ಸ್ವ ಅಭಿವೃದ್ಧಿ ಸಂಸ್ಥೆಗಳ ಪಾತ್ರಕ್ಕೂ ಅಡ್ಡಿಯಾಗುತ್ತದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ.
ಭಾರತದಾದ್ಯಂತ ಕಾರ್ಮಿಕರು, ರೈತರು, ಯುವಕರು, ವಿದ್ಯಾರ್ಥಿಗಳು, ಮಹಿಳೆಯರು, ದಲಿತರು ಮತ್ತು ಆದಿವಾಸಿಗಳು MGNREGA ವನ್ನು ರಕ್ಷಿಸಲು ಮತ್ತು ಬಲಪಡಿಸಲು ಮುಂದೆ ಬರಬೇಕೆಂದು SKM ಕರೆ ನೀಡಿದೆ. 200 ದಿನಗಳ ಕೆಲಸ ಮತ್ತು ಗೌರವಾನ್ವಿತ ಜೀವನಕ್ಕಾಗಿ ಕನಿಷ್ಠ ವೇತನ ದಿನಕ್ಕೆ 700 ರೂ.ಗಿಂತ ಕಡಿಮೆಯಿಲ್ಲದಂತೆ ಒದಗಿಸಲು ಕಾಯ್ದೆಯನ್ನು ತಿದ್ದುಪಡಿ ಮಾಡಬೇಕೆಂದು ಒತ್ತಾಯಿಸಿದೆ. VB-G RAM G ಮಸೂದೆಯು ಒಕ್ಕೂಟ ವ್ಯವಸ್ಥೆಯ ಸಾಂವಿಧಾನಿಕ ನಿಬಂಧನೆಗೆ ವಿರುದ್ಧವಾಗಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಆರೋಪಿಸಿದೆ.







