ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ಗಿಂದ ಮೊದಲು ಸ್ವದೇಶಕ್ಕೆ ವಾಪಸಾದ ಗಂಭೀರ್

ಗೌತಮ್ ಗಂಭೀರ್ | PC : PTI
ಲಂಡನ್: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಕೌಟುಂಬಿಕ ಕಾರಣದಿಂದ ಸ್ವದೇಶಕ್ಕೆ ಧಾವಿಸಿದ್ದಾರೆ.
ಹೃದಯಾಘಾತಕ್ಕೆ ಒಳಗಾಗಿ ಹೊಸದಿಲ್ಲಿಯ ಆಸ್ಪತ್ರೆಗೆ ದಾಖಲಾಗಿರುವ ತನ್ನ ತಾಯಿಯನ್ನು ನೋಡಲು ಭಾರತದ ಮಾಜಿ ಕ್ರಿಕೆಟಿಗ ಗುರುವಾರ ಬೆಳಗ್ಗೆ ಲಂಡನ್ನಿಂದ ಹೊರಟಿದ್ದಾರೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ದೃಢಪಡಿಸಿದೆ.
‘‘ಗೌತಮ್ ಗಂಭೀರ್ ಅವರು ಕೌಟುಂಬಿಕ ತುರ್ತು ಪರಿಸ್ಥಿತಿಯಿಂದಾಗಿ ಹಿಂತಿರುಗಿದ್ದಾರೆ. ಅವರ ಕುಟುಂಬಕ್ಕಾಗಿ ನಾವು ಪ್ರಾರ್ಥಿಸುತ್ತೇವೆ’’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಗಂಭೀರ್ ಅನುಪಸ್ಥಿತಿಯಲ್ಲಿ ಸಹಾಯಕ ಕೋಚ್ ರಿಯಾನ್ ಟೆನ್ ಡೊಶೆಟ್ ಉಸ್ತುವಾರಿ ವಹಿಸಿಕೊಳ್ಳಲಿದ್ದು, ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್ ಹಾಗೂ ಬೌಲಿಂಗ್ ಕೋಚ್ ಮೊರ್ನೆ ಮೊರ್ಕೆಲ್ ಸಾಥ್ ನೀಡಲಿದ್ದಾರೆ.
ತಾಯಿಯ ಆರೋಗ್ಯ ಸುಧಾರಿಸಿದರೆ, ಮೊದಲ ಟೆಸ್ಟ್ ಪಂದ್ಯಕ್ಕಿಂತ ಮುನ್ನ ಗಂಭೀರ್ ಅವರು ಮತ್ತೆ ತಂಡವನ್ನು ಸೇರುವ ನಿರೀಕ್ಷೆ ಇದೆ ಎಂದು ಮಂಡಳಿಯ ಮೂಲಗಳು ತಿಳಿಸಿವೆ.
ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯು ಲೀಡ್ಸ್ನಲ್ಲಿ ಜೂನ್ 20ರಂದು ಆರಂಭವಾಗಲಿದೆ.







