2018ರ ಗುಂಪು ಹಲ್ಲೆ ಪ್ರಕರಣ | 10 ಮಂದಿ ದೋಷಿಗಳಿಗೆ ಜೀವಾವಧಿ ಶಿಕ್ಷ ಪ್ರಕಟ

ಸಾಂದರ್ಭಿಕ ಚಿತ್ರ
ಲಕ್ನೊ: ಮಹತ್ವದ ಬೆಳವಣಿಗೆಯೊಂದರಲ್ಲಿ, ಮಾರ್ಚ್ 12ರಂದು ಹಾಪುರ್ ನಲ್ಲಿನ ಸ್ಥಳೀಯ ನ್ಯಾಯಾಲಯವೊಂದು 2018ರ ಗುಂಪು ಹಲ್ಲೆ ಪ್ರಕರಣದಲ್ಲಿ 10 ಮಂದಿಯನ್ನು ದೋಷಿ ಎಂದು ಘೋಷಿಸಿದ್ದು, ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ತೀರ್ಪನ್ನು ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶೆ (ಪೋಕ್ಸೊ) ಶ್ವೇತಾ ದೀಕ್ಷಿತ್ ಪ್ರಕಟಿಸಿದ್ದಾರೆ.
ದೋಷಿಗಳೆಂದು ಘೋಷಿಸಲಾಗಿರುವ 10 ಮಂದಿ ಗೋಹತ್ಯೆ ಮಾಡಿದ್ದಾರೆಂಬ ವದಂತಿಯನ್ನು ಆಧರಿಸಿ 45 ವರ್ಷದ ಖಾಸಿಂ ಖುರೇಷಿಯನ್ನು ಕೊಂದು, ಸಮಯ್ದೀನ್ (62) ಎಂಬುವವರ ಮೇಲೆ ಹಲ್ಲೆ ನಡೆಸಿದ್ದರು. ಇದಲ್ಲದೆ ದೋಷಿಗಳಾದ ಧೌಲಾನಾ ಜಿಲ್ಲೆಯ ಬಜ್ಹೈಡ ಗ್ರಾಮದ ರಾಕೇಶ್, ಹರಿಓಂ, ಯುಧಿಷ್ಠಿರ್, ರಿಂಕು, ಕರಣ್ ಪಾಲ್, ಮನೀಷ್, ಲಲಿತ್, ಸೋನು, ಕಪ್ತಾನ್ ಹಾಗೂ ಮಂಗೇರಾಮ್ ಅವರಿಗೆ ತಲಾ ರೂ. 58,000 ದಂಡವನ್ನೂ ವಿಧಿಸಲಾಗಿದೆ.
ಸಂತ್ರಸ್ತರು ಹಾಗೂ ಆರೋಪಿಗಳ ನಡುವೆ ಯಾವುದೇ ಪೂರ್ವ ದ್ವೇಷವಿರಲಿಲ್ಲ ಎಂಬುದನ್ನು ನಿರೂಪಿಸುವಲ್ಲಿ ಪ್ರಾಸಿಕ್ಯೂಷನ್ ಪರ ಸರಕಾರಿ ವಕೀಲ ವಿಜಯ್ ಚೌಹಾಣ್ ಯಶಸ್ವಿಯಾದರು. ಇದರೊಂದಿಗೆ, ದೋಷಿಗಳಿಗೆ ಮರಣ ದಂಡನೆಯನ್ನು ವಿಧಿಸಬಾರದು ಎಂದು ನ್ಯಾಯಾಲಯಕ್ಕೆ ಮನವಿಯನ್ನೂ ಮಾಡಿದರು.
ಗೋಹತ್ಯೆ ಮಾಡಿದ್ದಾರೆಂಬ ಆರೋಪದಲ್ಲಿ ಜೂನ್, 2018ರಲ್ಲಿ ಖಾಸಿಂ ಖುರೇಷಿ ಎಂಬ ವ್ಯಕ್ತಿಯನ್ನು ಗುಂಪೊಂದು ಹಲ್ಲೆ ನಡೆಸಿ ಹತ್ಯೆಗೈದಿತ್ತು. ಗೋಹತ್ಯೆ ನಡೆಸಲಾಗಿದೆ ಎಂಬ ವದಂತಿಯನ್ನು ಆಧರಿಸಿ ಸಮಯ್ದೀನ್ ಮೇಲೆಯೂ ಗುಂಪು ಹಲ್ಲೆ ನಡೆದಿತ್ತಾದರೂ, ಅವರು ಬದುಕುಳಿದರು. ಮೊದಲಿಗೆ, ಪೊಲೀಸರು ದಾರಿ ತಪ್ಪಿಸುವಂಥ ಎಫ್ ಐ ಆರ್ ದಾಖಲಿಸಿಕೊಂಡು, ಈ ಘಟನೆಯು ಮೋಟರ್ ಸೈಕಲ್ ಅಪಘಾತದಲ್ಲಿ ನಡೆದಿದೆ ಎಂದು ಪ್ರತಿಪಾದಿಸಿದ್ದರು. ಆದರೆ, ಸಮಯ್ದೀನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ನಂತರ, ತನಿಖೆಯು ಮರು ಪ್ರಾರಂಭಗೊಂಡು, ನೈಜ ಘಟನೆಯ ಮೇಲೆ ಬೆಳಕು ಚೆಲ್ಲಿತ್ತು.







