ಗುಂಪಿನಿಂದ ಥಳಿಸಿ ಹತ್ಯೆ ಪ್ರಕರಣ ಮೂವರಿಗೆ ಜೀವವಾಧಿ ಶಿಕ್ಷೆ

ಸಾಂದರ್ಭಿಕ ಚಿತ್ರ
ಥಾಣೆ, ನ. 15: ಗುಂಪಿನಿಂದ ಥಳಿಸಿ ಹತ್ಯೆ ಪ್ರಕರಣದಲ್ಲಿ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ನ್ಯಾಯಾಲಯ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಮೂರ್ತಿ ವಿ.ಜಿ. ಮೋಹಿತೆ ಅವರು ಶುಕ್ರವಾರ, ರಾಮತೇಜ್ ಆಲಿಯಾಸ್ ಗವ್ಯ ರಾಮ ಯಾದವ್, ಅಮರ್ಜೀತ್ ಆಲಿಯಾಸ್ ಚಬಿ ಬಿಂದ್ರಪ್ರಸಾದ್ ಗುಪ್ತಾ ಹಾಗೂ ಚಿರಾಗ್ ಆಲಿಯಾಸ್ ಕಲ್ಯಾ ಶೋಭನಾತ್ ಠಾಕೂರ ಭಾರತೀಯ ದಂಡ ಸಂಹಿತೆಯ ಸೆಕ್ಷನ್ಗಳಾದ 302, 323 ಹಾಗೂ 504ರ ಅಡಿಯಲ್ಲಿ ಅಪರಾಧ ಎಸಗಿದ್ದಾರೆ ಎಂದು ಪರಿಗಣಿಸಿದ್ದಾರೆ.
ನ್ಯಾಯಾಲಯ ಮೂವರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 10 ಸಾವಿರ ದಂಡ ವಿಧಿಸಿತು. ಇನ್ನೋರ್ವ ಆರೋಪಿ ಶಿವಕುಮಾರ್ ಆಲಿಯಾಸ್ ಲಾಲಾ ಬಿಂದರ್ ಲೋಧ್ನನ್ನು ಸಂಶಯದ ಲಾಭದ ಮೇರೆಗೆ ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿತು.
ಈ ಘಟನೆ 2021 ಮಾರ್ಚ್ 6ರಂದು ನಡೆದಿತ್ತು. ಭಯಂದರ್ ಪೂರ್ವದ ಇಂದಿರಾ ನಗರ್ ಪ್ರದೇಶದಲ್ಲಿ ಸೂರಜ್ಭಾನ್ ಓಂಪ್ರಕಾಶ್ ಸೋನಿ ಹಾಗೂ ವಿಕ್ಕಿ ಆಲಿಯಾಸ್ ಅಭಿಷೇಕ್ ಸಿಂಗ್ಗೆ ಕಳ್ಳತನದ ಶಂಕೆಯಲ್ಲಿ ಗುಂಪೊಂದು ಥಳಿಸಿತ್ತು.
ಈ ಘಟನೆಯಲ್ಲಿ ಸೂರಜ್ಭಾನ್ ಓಂಪ್ರಕಾಶ್ ಸೋನಿ ಸಾವನ್ನಪ್ಪಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಅವರ ಮೆದುಳಿನಲ್ಲಿ ಆದ ರಕ್ತ ಸ್ರಾವದಿಂದ ಸಾವು ಸಂಭವಿಸಿದೆ ಎಂದು ತಿಳಿದು ಬಂದಿತ್ತು.
ಆರೋಪಿಗಳ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು 10 ಮಂದಿ ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ ಎಂದು ಹೆಚ್ಚುವರಿ ಸರಕಾರಿ ಅಭಿಯೋಜಕಿ ರಶ್ಮಿ ಕ್ಷೀರಸಾಗರ್ ಹೇಳಿದ್ದಾರೆ.
ಹಲ್ಲೆಯ ವೀಡಿಯೊಗಳು ಅಪರಾಧ ಎಷ್ಟು ಗಂಭೀರ ಹಾಗೂ ಕ್ರೂರ ಎಂಬುದನ್ನು ತೋರಿಸುತ್ತವೆ ಎಂದು ನ್ಯಾಯಾಲಯ ಹೇಳಿದೆ.







