Uttar Pradesh | ಗ್ಯಾಂಗ್ ಸ್ಟರ್ ರವಿ ಕಾನಾ ನ್ಯಾಯಾಲಯದ ಆದೇಶವಿಲ್ಲದೆ ಜೈಲಿನಿಂದ ಬಿಡುಗಡೆ!

ಗ್ಯಾಂಗ್ ಸ್ಟರ್ ರವಿ ಕಾನಾ (Photo credit: ITG)
ನೊಯ್ಡಾ: ಗುಜರಿ ಉದ್ಯಮಿ, ಗ್ಯಾಂಗ್ ಸ್ಟರ್ ರವಿ ಕಾನಾನನ್ನು ನ್ಯಾಯಾಲಯದ ಯಾವುದೇ ಆದೇಶವಿಲ್ಲದೆ ಬಂದಾ ಜೈಲಿನಿಂದ ಬಿಡುಗಡೆ ಮಾಡಲಾಗಿದೆ ಎಂದು Times of India ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸುಲಿಗೆ ಸೇರಿದಂತೆ ಅಕ್ರಮ ಮಾರ್ಗಗಳ ಮೂಲಕ ಸಾಮ್ರಾಜ್ಯ ನಿರ್ಮಿಸಿದ್ದಾನೆ ಎಂದು ಉದ್ಯಮಿ ರವಿ ಕಾನಾ ವಿರುದ್ಧ ಆರೋಪಿಸಲಾಗಿತ್ತು.
ರವಿ ಕಾನಾ ವಿರುದ್ಧ ಉತ್ತರ ಪ್ರದೇಶ ಗ್ಯಾಂಗ್ಸ್ಟರ್ ಮತ್ತು ಸಾಮಾಜಿಕ ವಿರೋಧಿ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
2024ರಲ್ಲಿ ಬಂಧನಕ್ಕೊಳಗಾಗಿದ್ದ ರವಿ ಕಾನಾ ಇದೀಗ ಬಂಧನದಿಂದ ಮುಕ್ತನಾಗಿದ್ದಾನೆ. ಆತನನ್ನು ನ್ಯಾಯಾಲಯ ಪ್ರಕರಣದಲ್ಲಿ ಖುಲಾಸೆಗೊಳಿಸಿಲ್ಲ. ನ್ಯಾಯಾಲಯದ ಆದೇಶವಿಲ್ಲದೆ ಆತ ಬಂಧನದಲ್ಲಿದ್ದ ಬಂದಾ ಜಿಲ್ಲೆಯ ಜೈಲು ಈ ತಿಂಗಳ ಆರಂಭದಲ್ಲೇ ಆತನನ್ನು ಬಿಡುಗಡೆ ಮಾಡಿದೆ ಎಂದು ವರದಿಯಾಗಿದೆ.
ರವಿ ಕಾನಾನನ್ನು ಬಿಡುಗಡೆಗೊಳಿಸಲಾಗಿದೆ ಎಂಬ ಸಂಗತಿಯನ್ನು ನೊಯ್ಡಾದ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಗಮನಕ್ಕೆ ತಂದ ಬಳಿಕ, ನ್ಯಾಯಾಲಯವು ಬಾಂದಾ ಜೈಲು ಅಧೀಕ್ಷಕರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ. ಪೊಲೀಸರು ಆತನ ಪತ್ತೆಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ.
“ನ್ಯಾಯಾಲಯದ ಗಮನಕ್ಕೇ ತಾರದೆ ಇನ್ನೊಂದು ಪ್ರಕರಣದಲ್ಲಿ ನಿಮ್ಮ ಜೈಲಿನಲ್ಲಿರುವ ಆರೋಪಿಯನ್ನು ಯಾವ ಸನ್ನಿವೇಶದಲ್ಲಿ ಹಾಗೂ ಯಾವ ಆಧಾರದಲ್ಲಿ ಬಿಡುಗಡೆ ಮಾಡಿದಿರಿ?” ಎಂದು ಬಾಂದಾ ಜೈಲು ಅಧೀಕ್ಷಕರನ್ನು ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಸಂಜೀವ್ ಕುಮಾರ್ ತ್ರಿಪಾಠಿ ಪ್ರಶ್ನಿಸಿದ್ದಾರೆ.
ಕ್ರಿಮಿನಲ್ ಒಬ್ಬನನ್ನು ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಅವಕಾಶ ನೀಡಿರುವ ಅಧಿಕಾರಿಯ ವಿರುದ್ಧ ಯಾಕೆ ಪ್ರಕರಣವೊಂದನ್ನು ದಾಖಲಿಸಬಾರದು ಎಂದೂ ನ್ಯಾಯಾಲಯ ಪ್ರಶ್ನಿಸಿದೆ.
ಜಿ.ಬಿ.ನಗರದ ದಂಕೌರ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಾಗಿದ್ದ ರವಿ ಕಾನಾನನ್ನು ತನ್ನೆದುರು ಹಾಜರುಪಡಿಸಲು ನ್ಯಾಯಾಲಯವು ಈಗಾಗಲೇ ಮತ್ತೊಂದು ಕಾನೂನು ವಿಚಾರಣೆಯಲ್ಲಿ ಜೈಲಿನಲ್ಲಿರುವ ವ್ಯಕ್ತಿಯನ್ನು ಸ್ಥಳಾಂತರಿಸಲು ಹೊರಡಿಸುವ ಬಿ ವಾರಂಟ್ ಅನ್ನು ಹೊರಡಿಸಿತ್ತು.
ಮತ್ತೊಂದು ಪ್ರಕರಣದಲ್ಲಿ ಗೌತಮ್ ಬುದ್ಧ್ ನಗರ್ ಜೈಲಿನಲ್ಲಿದ್ದ ರವಿ ಕಾನಾನನ್ನು ಆಡಳಿತಾತ್ಮಕ ಕಾರಣಗಳಿಗಾಗಿ ಆಗಸ್ಟ್ 2024ರಲ್ಲಿ ಬಾಂದಾ ಜೈಲಿಗೆ ಸ್ಥಳಾಂತರಿಸಲಾಗಿತ್ತು.
ಹೀಗಿದ್ದೂ, ವಿಡಿಯೊ ಕಾನ್ಫರೆನ್ಸ್ ಮೂಲಕ ರವಿ ಕಾನಾನನ್ನು ಗುರುವಾರ ಬಾಂದಾ ಜೈಲಿನಿಂದ ನ್ಯಾಯಾಲಯದೆದುರು ಹಾಜರುಪಡಿಸಲಾಗಿತ್ತು. ಆದರೆ, ಸಂಜೆ ಆತನನ್ನು ಬಿಡುಗಡೆಗೊಳಿಸಲಾಗಿತ್ತು. ನೊಯ್ಡಾ ನ್ಯಾಯಾಲಯಕ್ಕೆ ಪತ್ರವೊಂದನ್ನು ಬರೆದಿದ್ದ ಜೈಲು ಅಧೀಕ್ಷಕರು, ಪೊಲೀಸ್ ಕಾವಲುಗಾರನ ಅಲಭ್ಯತೆಯಿಂದಾಗಿ ಕಾನಾನನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದೆದುರು ಹಾಜರುಪಡಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದರು.
ಅಲ್ಲದೆ, ರವಿ ಕಾನಾನನ್ನು ಯಾಕೆ ಜೈಲಿನಿಂದ ಬಿಡುಗಡೆ ಮಾಡಬೇಕಾಯಿತು ಎಂಬ ಕುರಿತು ತಿರುಚಿದ ವಿವರಣೆಯನ್ನೂ ಅವರು ನೀಡಿದ್ದಾರೆ. ವಿಚಾರಣಾಧೀನ ಕೈದಿಗಳನ್ನು ಬಿಡುಗಡೆಗೊಳಿಸುವಂತೆ ನಾವು ಎಲ್ಲ ಕಸ್ಟಡಿ ವಾರಂಟ್ ಗಳನ್ನು ಸ್ವೀಕರಿಸಿದ್ದೇವೆ ಎಂದು ಅವರು ಸಮಜಾಯಿಷಿ ನೀಡಿದ್ದಾರೆ. ಆದರೆ, ರವಿ ಕಾನಾ ಬೇರೊಂದು ಪ್ರಕರಣದಲ್ಲಿ ಜಾಮೀನು ಪಡೆದಿದ್ದ ಎಂದು ಹೇಳಲಾಗಿದೆ.
ಆದರೆ, ಈ ವಿವರಣೆಯನ್ನು ತಳ್ಳಿ ಹಾಕಿರುವ ನ್ಯಾಯಾಲಯ, ರವಿ ಕಾನಾ ಬಿ ವಾರಂಟ್ ಅಡಿ ಇರುವುದು ಹಾಗೂ ಆತನನ್ನು ಕಸ್ಟಡಿಗೆ ಪಡೆಯಲು ತನಿಖಾಧಿಕಾರಿಯು ಸಲ್ಲಿಸಿದ ಅರ್ಜಿಯನ್ನು ಆಧರಿಸಿ, ಆತನಿಗೆ ಸಮನ್ಸ್ ಜಾರಿಗೊಳಿಸಲಾಗಿತ್ತು ಎಂಬ ಸಂಗತಿಯ ಕುರಿತು ಜೈಲು ಅಧೀಕ್ಷಕರಿಗೆ ತಿಳಿದಿತ್ತು ಎಂದು ತರಾಟೆಗೆ ತೆಗೆದುಕೊಂಡಿದೆ. “ಆತನನ್ನು ಬಿಡುಗಡೆ ಮಾಡಬಾರದಿತ್ತು” ಎಂದೂ ನ್ಯಾಯಾಲಯ ಆಕ್ಷೇಪಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ನೊಯ್ಡಾದ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ಸಂತೋಷ್ ಕುಮಾರ್, “ನ್ಯಾಯಾಲಯದ ಆದೇಶವನ್ನು ಸ್ವೀಕರಿಸಿದ ಬಳಿಕ, ರವಿ ಕಾನಾನನ್ನು ಬಂಧಿಸಲು ಐದು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಆತನ ಅಡಗುತಾಣಗಳ ಮೇಲೆ ನಾವು ಹಲವು ದಾಳಿಗಳನ್ನು ನಡೆಸಿದೆವು. ಆದರೆ, ಆತ ಅಲ್ಲಿರಲಿಲ್ಲ” ಎಂದು ತಿಳಿಸಿದ್ದಾರೆ.







