2018ರ ರೆಮೋ ಡಿಸೋಝಾ ದಂಪತಿಗೆ ಬೆದರಿಕೆ ಪ್ರಕರಣ: ಗ್ಯಾಂಗ್ ಸ್ಟರ್ ರವಿ ಪೂಜಾರಿಯ ಬಂಧನ

Photo| NDTV
ಮುಂಬೈ: 2018ರಲ್ಲಿ ಬಾಲಿವುಡ್ ನೃತ್ಯ ನಿರ್ದೇಶಕ ರೆಮೋ ಡಿಸೋಝಾ ಹಾಗೂ ಅವರ ಪತ್ನಿ ಲಿಝಿಲ್ಲೆ ಡಿಸೋಝಾಗೆ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್ ಸ್ಟರ್ ರವಿ ಪೂಜಾರಿಯನ್ನು ಬಂಧಿಸಲಾಗಿದೆ. ಸೆನೆಗಲ್ ನಿಂದ ಗಡೀಪಾರಾದಾಗಿನಿಂದ ರವಿ ಪೂಜಾರಿ ಜೈಲಿನಲ್ಲಿದ್ದಾನೆ. ಆದರೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನನ್ನು ಇಲ್ಲಿಯವರೆಗೆ ಬಂಧಿಸಿರಲಿಲ್ಲ.
ಗುರುವಾರ ಮುಂಬೈ ಪೊಲೀಸ್ ಇಲಾಖೆಯ ಅಪರಾಧ ವಿಭಾಗದ ಪೊಲೀಸರು ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಬಳಿಕ, ಜನವರಿ 27ವರೆಗೆ ನ್ಯಾಯಾಲಯ ಆತನನ್ನು ಪೊಲೀಸರ ವಶಕ್ಕೆ ಒಪ್ಪಿಸಿದೆ.
ಸತ್ಯೇಂದ್ರ ತ್ಯಾಗಿಯ ಪರವಾಗಿ 50 ಲಕ್ಷ ರೂ. ನೀಡುವಂತೆ ಡಿಸೋಝಾ ದಂಪತಿಗಳಿಗೆ ಬೆದರಿಕೆ ಒಡ್ಡಿದ್ದ ರವಿ ಪೂಜಾರಿಯ ಹೆಸರನ್ನು ಈಗಾಗಲೇ ಈ ಪ್ರಕರಣದಲ್ಲಿ ಓರ್ವ ಆರೋಪಿಯನ್ನಾಗಿ ಸೇರ್ಪಡೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಕ್ಟೋಬರ್ 2016ರಿಂದ ಫೆಬ್ರವರಿ 2018ರವರೆಗೆ ಪದೇ ಪದೇ ಕರೆ ಮಾಡಿದ್ದ ರವಿ ಪೂಜಾರಿ, ಡಿಸೋಝಾ ದಂಪತಿ ಹಾಗೂ ಅವರ ವ್ಯವಸ್ಥಾಪಕನಿಗೆ ಬೆದರಿಕೆ ಒಡ್ಡಿದ್ದ. ‘ಡೆತ್ ಆಫ್ ಅಮರ್’ ಚಿತ್ರವನ್ನು ಶೀಘ್ರವಾಗಿ ಬಿಡುಗಡೆ ಮಾಡುವಂತೆ ಒತ್ತಡ ಹೇರಿದ್ದ ಆತ, ಈ ವಿಷಯವನ್ನು ಇತ್ಯರ್ಥ ಪಡಿಸಲು 50 ಲಕ್ಷ ರೂ. ನೀಡಬೇಕು ಎಂದು ಬೆದರಿಕೆ ಹಾಕಿದ್ದ ಎಂದು ಆರೋಪಿಸಲಾಗಿದೆ.
ಇದಕ್ಕೂ ಮುನ್ನ, 2018ರಲ್ಲಿ ರೆಮೊ ಡಿಸೋಝಾ ಹಾಗೂ ಸತ್ಯೇಂದ್ರ ತ್ಯಾಗಿ ‘ಅಮರ್ ಮಸ್ಟ್ ಡೈ’ ಚಿತ್ರದ ಕುರಿತು ಪರಸ್ಪರ ಒಡಂಬಡಿಕೆ ಮಾಡಿಕೊಂಡಿದ್ದರು. ಬಳಿಕ ಅವರಿಬ್ಬರ ನಡುವೆ ಹಣಕಾಸು ಹಾಗೂ ಚಿತ್ರದ ಹಕ್ಕುಸ್ವಾಮ್ಯದ ಕುರಿತು ವ್ಯಾಜ್ಯ ಉದ್ಭವವಾಗಿತ್ತು. ನಾನು ಈ ಚಿತ್ರದಲ್ಲಿ ಹೂಡಿಕೆ ಮಾಡಿದ್ದೇನೆ ಎಂದು ಹೇಳಿದ್ದ ತ್ಯಾಗಿ, ರೆಮೋ ಡಿಸೋಝಾ ನನಗೆ ನೀಡುವುದಾಗಿ ಹೇಳಿದ್ದ 5 ಕೋಟಿ ರೂ. ಅನ್ನು ನೀಡಿಲ್ಲ ಎಂದು ಆರೋಪಿಸಿದ್ದರು.
ಬಳಿಕ, ತ್ಯಾಗಿ ಹಣವನ್ನು ಮರಳಿ ಪಡೆಯಲು ರವಿ ಪೂಜಾರಿಯ ಮೊರೆ ಹೋಗಿದ್ದರು ಎನ್ನಲಾಗಿದೆ. ಇದರ ಬೆನ್ನಿಗೆ ಡಿಸೋಝಾ ದಂಪತಿ ಹಾಗೂ ಅವರ ವ್ಯವಸ್ಥಾಪಕನಿಗೆ ಬೆದರಿಕೆ ಒಡ್ಡಲು ಪ್ರಾರಂಭಿಸಿದ್ದ ರವಿ ಪೂಜಾರಿ, ವಿಷಯವನ್ನು ಇತ್ಯರ್ಥ ಪಡಿಸಲು ನನಗೆ 50 ಲಕ್ಷ ರೂ. ಸುಲಿಗೆ ಮೊತ್ತ ನೀಡಬೇಕು ಎಂದು ಆಗ್ರಹಿಸಿದ್ದ ಎಂದು ಆರೋಪಿಸಲಾಗಿದೆ.







