ಗೌರವ್ ಗೊಗೊಯಿ ಮಾಡಿರುವ ಆರೋಪಗಳಿಗೆ ಸಾಕ್ಷ್ಯಾಧಾರ ಒದಗಿಸಿದರೆ ಸಾರ್ವಜನಿಕ ಜೀವನದಿಂದ ನಿವೃತ್ತಿ: ಅಸ್ಸಾಂ ಮುಖ್ಯಮಂತ್ರಿ

ಹಿಮಂತ ಬಿಸ್ವ ಶರ್ಮ | Photo: PTI
ಗುವಾಹಟಿ: ತಮ್ಮ ಪತ್ನಿ ವಿರುದ್ಧ ಕಾಂಗ್ರೆಸ್ ಸಂಸದ ಗೌರವ್ ಗೊಗೊಯಿ ಮಾಡಿರುವ ಆರೋಪಗಳು ಆಧಾರರಹಿತವಾಗಿದ್ದು, ಈ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದಾದರೂ ಸಾಕ್ಷ್ಯಾಧಾರಗಳನ್ನು ಒದಗಿಸಿದರೆ ನಾನು ಸಾರ್ವಜನಿಕ ಜೀವನದಿಂದ ನಿವೃತ್ತಿಗೊಳ್ಳುವುದೂ ಸೇರಿದಂತೆ ಯಾವುದೇ ಬಗೆಯ ಶಿಕ್ಷೆಯನ್ನು ಒಪ್ಪಿಕೊಳ್ಳಲು ಸಿದ್ಧನಿದ್ದೇನೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಹೇಳಿದ್ದಾರೆ ಎಂದು ndtv.com ವರದಿ ಮಾಡಿದೆ.
ಈ ಕುರಿತು ‘ಎಕ್ಸ್’ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಅವರು, “ಗೌರವ್ ಗೊಗೊಯಿ ಪ್ರಸ್ತಾಪಿಸಿರುವ ಸಂಸ್ಥೆಗೆ ಕೇಂದ್ರ ಸರ್ಕಾರವು ಯಾವುದೇ ನಿಧಿಯನ್ನು ಬಿಡುಗಡೆ ಮಾಡಿಲ್ಲ ಎಂಬ ವಾಸ್ತವವನ್ನು ಅದಕ್ಕೆ ನೀಡಲಾಗಿರುವ ಪ್ರತಿಕ್ರಿಯೆಯೇ ಸ್ಪಷ್ಟಪಡಿಸುತ್ತಿದೆ. ನನ್ನ ಪತ್ನಿಯಾಗಲಿ ಅಥವಾ ಆಕೆ ಸಂಬಂಧ ಹೊಂದಿರುವ ಸಂಸ್ಥೆಯಾಗಲಿ ಭಾರತ ಸರ್ಕಾರದಿಂದ ಯಾವುದೇ ನಿಧಿಯನ್ನು ಸ್ವೀಕರಿಸಿಲ್ಲ ಅಥವಾ ನಿಧಿಗಾಗಿ ಪ್ರಸ್ತಾಪ ಸಲ್ಲಿಸಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ. ಈ ಮಾತಿಗೆ ವ್ಯತಿರಿಕ್ತವಾಗಿ ಯಾರಾದರೂ ಸಾಕ್ಚ್ಯಾಧಾರಗಳನ್ನು ಒದಗಿಸಿದರೆ ನಾನು ಸಾರ್ವಜನಿಕ ಜೀವನದಿಂದ ನಿವೃತ್ತಿಗೊಳ್ಳುವುದೂ ಸೇರಿದಂತೆ ಯಾವುದೇ ಬಗೆಯ ಶಿಕ್ಷೆಯನ್ನು ಒಪ್ಪಿಕೊಳ್ಳಲು ಸಿದ್ಧನಿದ್ದೇನೆ" ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಗೌರವ್ ಗೊಗೊಯಿ, "ಟ್ವಿಟರ್ನಲ್ಲಿ ಟೈಪಿಸುವ ಬದಲು ದಯವಿಟ್ಟು ವಿಧಾನಸಭೆಯಲ್ಲಿ ಉಪಸ್ಥಿತರಿದ್ದು ಸ್ಪಷ್ಟೀಕರಣ ನೀಡಿ. ಇಂದು ಮುಂಜಾನೆ ಕಾಂಗ್ರೆಸ್ ಶಾಸಕರು ಸಂಪೂರ್ಣ ಪ್ರೈಡ್ ಮೀಡಿಯಾ-ಕೆಎಂಎಸ್ವೈ ವ್ಯವಹಾರದ ಕುರಿತು ಚರ್ಚಿಸಲು ಕಲಾಪ ಮುಂದೂಡಿಕೆ ನಿರ್ಣಯವನ್ನು ಮಂಡಿಸಿದೆ. ಆದರೆ, ಅದಕ್ಕೆ ನಿಮ್ಮಲ್ಲಿ ಉತ್ತರದ ಕೊರತೆ ಇದೆ" ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಲೋಕಸಭಾ ಉತ್ತರಗಳನ್ನು ಪೋಸ್ಟ್ ಮಾಡಿದ್ದ ಗೊಗೊಯಿ, "ನಿನ್ನೆ ಇಡೀ ದಿನ ಶರ್ಮ ಅವರು ತಮ್ಮ ಪತ್ನಿಯ ಸಂಸ್ಥೆಯ ಕುರಿತು ಒಂದು ಸಾಲಿನ ಸಮರ್ಥನೆ ಮಾಡಿಕೊಂಡಿದ್ದರು. ಅವರ ಅನುಕೂಲಕ್ಕಾಗಿ ನಾನಿಲ್ಲಿ ಕೇಂದ್ರ ವಾಣಿಜ್ಯ ಮತ್ತು ಉದ್ಯಮಗಳ ಸಚಿವ ಪಿಯೂಷ್ ಗೋಯಲ್ ಅವರು ಲೋಕಸಭೆಗೆ ನೀಡಿರುವ ಉತ್ತರವನ್ನು ಲಗತ್ತಿಸಿದ್ದೇನೆ. ಪಿಯೂಷ್ ಗೋಯಲ್ ಅವರ ಉತ್ತರವು ಸತ್ಯವನ್ನು ಬಯಲು ಮಾಡಿದ್ದು, ಇಬ್ಬರೂ ಸಚಿವರೂ ಸ್ಪಷ್ಟನೆ ನೀಡಬೇಕಿದೆ" ಎಂದು ಹೇಳಿದ್ದರು.
ಈ ನಡುವೆ, ಹಿಮಂತ ಬಿಸ್ವ ಶರ್ಮ ಅವರ ಪತ್ನಿ ರಿನಿಕಿ ಭೂಯನ್ ಶರ್ಮ ಅವರು ಗೌರವ್ ಗೊಗೊಯಿ ವಿರುದ್ಧ ರೂ. 10 ಕೋಟಿ ಮೊತ್ತದ ಮಾನನಷ್ಟ ಮೊಕದ್ದಮೆ ಹೂಡಲಿದ್ದೇನೆ ಎಂದು ಎಚ್ವರಿಕೆ ನೀಡಿದ್ದಾರೆ.







