"ಸತ್ಯವೊಂದೇ ಗೆಲ್ಲುತ್ತದೆ": ಹಿಂಡೆನ್ಬರ್ಗ್ ಆರೋಪಗಳಿಗೆ ಸೆಬಿ ಕ್ಲೀನ್ ಚಿಟ್ ಬೆನ್ನಲ್ಲೇ ಗೌತಮ್ ಅದಾನಿ ಪ್ರತಿಕ್ರಿಯೆ

ಗೌತಮ್ ಅದಾನಿ | PC : PTI
ಹೊಸದಿಲ್ಲಿ: ಅಮೆರಿಕದ ಹೂಡಿಕೆ ಸಂಸ್ಥೆ ಹಿಂಡೆನ್ಬರ್ಗ್ ರೀಸರ್ಚ್ ಮಾಡಿದ್ದ ಆರೋಪಗಳಿಗೆ ಸಂಬಂಧಿಸಿದಂತೆ ಸೆಬಿ ಕ್ಲೀನ್ ಚಿಟ್ ನೀಡಿರುವುದನ್ನು ಸ್ವಾಗತಿಸಿರುವ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿಯವರು, ‘ಸತ್ಯವೊಂದೇ ಗೆಲ್ಲುತ್ತದೆ. ಆರಂಭದಿಂದಲೂ ಆರೋಪಗಳಿಗೆ ಯಾವುದೇ ಆಧಾರವಿಲ್ಲ ಎಂದು ನಾವು ಯಾವತ್ತೂ ಹೇಳುತ್ತಲೇ ಬಂದಿದ್ದೆವು. ಈಗ ಸೆಬಿ ಆದೇಶವು ಅದನ್ನು ದೃಢಪಡಿಸಿದೆ’ ಎಂದು ಹೇಳಿದ್ದಾರೆ.
ಹಿಂಡೆನ್ಬರ್ಗ್ ವರದಿಯಿಂದಾಗಿ ನಷ್ಟವನ್ನು ಅನುಭವಿಸಿದ ಹೂಡಿಕೆದಾರರ ಕುರಿತು ಸಹಾನುಭೂತಿಯನ್ನೂ ಅದಾನಿ ವ್ಯಕ್ತಪಡಿಸಿದ್ದಾರೆ.
‘ವ್ಯಾಪಕ ತನಿಖೆಯ ಬಳಿಕ ಸೆಬಿ ಹಿಂಡೆನ್ಬರ್ಗ್ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎನ್ನುವುದನ್ನು ಎತ್ತಿ ಹಿಡಿದಿದೆ. ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ನಮ್ಮ ಉದ್ಯಮ ಸಮೂಹದ ಮೂಲಮಂತ್ರವಾಗಿದೆ. ದುರುದ್ದೇಶಪೂರಿತ ಮತ್ತು ಸುಳ್ಳು ವರದಿಗಳಿಂದ ಹಣವನ್ನು ಕಳೆದುಕೊಂಡವರ ನೋವು ನಮಗೆ ಅರ್ಥವಾಗುತ್ತದೆ. ಇಂತಹ ಸುಳ್ಳು ಕಥೆಗಳನ್ನು ಹರಡಿದವರು ದೇಶದ ಕ್ಷಮೆ ಯಾಚಿಸಬೇಕಿದೆ ’ಎಂದು ಅದಾನಿ ಗುರುವಾರ ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ.
ಭಾರತದ ಸಂಸ್ಥೆಗಳಿಗೆ,ಭಾರತದ ಜನತೆಗೆ ಮತ್ತು ದೇಶ ನಿರ್ಮಾಣಕ್ಕೆ ನಮ್ಮ ಬದ್ಧತೆಯು ಅಚಲವಾಗಿದೆ. ಸತ್ಯಮೇವ ಜಯತೇ. ಜೈಹಿಂದ್ ’ಎಂದೂ ಅದಾನಿ ಬರೆದಿದ್ದಾರೆ.







