ಅಮೆರಿಕದ ಪ್ರಾಸಿಕ್ಯೂಟರ್ ಗಳಿಂದ ಗೌತಮ್ ಅದಾನಿ ಕುರಿತು ಮತ್ತೆ ಪರಿಶೀಲನೆ: ವರದಿ

ಗೌತಮ ಅದಾನಿ | PC : PTI
ಹೊಸದಿಲ್ಲಿ: ಭಾರತೀಯ ಶತಕೋಟ್ಯಾಧಿಪತಿ ಗೌತಮ್ ಅದಾನಿಯವರ ಕಂಪನಿಗಳು ತಮ್ಮ ಮುಂದ್ರಾ ಬಂದರಿನ ಮೂಲಕ ಇರಾನಿನಿಂದ ದ್ರವೀಕೃತ ಪೆಟ್ರೋಲಿಯಂ ಅನಿಲ(ಎಲ್ಪಿಜಿ)ವನ್ನು ಭಾರತಕ್ಕೆ ಆಮದು ಮಾಡಿಕೊಂಡಿವೆಯೇ ಎಂಬ ಬಗ್ಗೆ ಅಮೆರಿಕದ ಪ್ರಾಸಿಕ್ಯೂಟರ್ ಗಳು ತನಿಖೆ ನಡೆಸುತ್ತಿದ್ದಾರೆ ಎಂದು ವಾಲ್ಸ್ಟ್ರೀಟ್ ಜರ್ನಲ್ ಅನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ಸೋಮವಾರ ವರದಿ ಮಾಡಿದೆ.
ಗುಜರಾತಿನ ಮುಂದ್ರಾ ಮತ್ತು ಪರ್ಷಿಯನ್ ಕೊಲ್ಲಿ ನಡುವೆ ಸಂಚರಿಸುವ ಟ್ಯಾಂಕರ್ ಗಳು ನಿರ್ಬಂಧಗಳಿಂದ ನುಣುಚಿಕೊಳ್ಳುವ ಹಡಗುಗಳಿಗೆ ಸಾಮಾನ್ಯವೆಂದು ತಜ್ಞರು ಹೇಳುವ ಗುಣಲಕ್ಷಣಗಳನ್ನು ಪ್ರದರ್ಶಿಸಿವೆ ಎನ್ನುವುದನ್ನು ವಾಲ್ಸ್ಟ್ರೀಟ್ ಜರ್ನಲ್ ನಡೆಸಿರುವ ತನಿಖೆಯು ಕಂಡುಕೊಂಡಿದೆ ಎಂದು ವರದಿಯು ಹೇಳಿದೆ.
ಅದಾನಿ ಎಂಟರ್ಪ್ರೈಸಸ್ ಗೆ ಸರಕುಗಳನ್ನು ಸಾಗಿಸಲು ಬಳಕೆಯಾಗುವ ಹಲವಾರು ಎಲ್ಪಿಜಿ ಟ್ಯಾಂಕರ್ ಗಳ ಚಟುವಟಿಕೆಗಳನ್ನು ಅಮೆರಿಕದ ನ್ಯಾಯ ಇಲಾಖೆಯು ಪರಿಶೀಲಿಸುತ್ತಿದೆ ಎಂದು ವಿಷಯವನ್ನು ಬಲ್ಲ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
ವರದಿಯನ್ನು ತಕ್ಷಣಕ್ಕೆ ದೃಢಪಡಿಸಿಕೊಳ್ಳಲು ಸುದ್ದಿಸಂಸ್ಥೆಗೆ ಸಾಧ್ಯವಾಗಿಲ್ಲ.
ಇರಾನ್ ಮೂಲದ ಎಲ್ಪಿಜಿಯನ್ನು ಒಳಗೊಂಡ ನಿರ್ಬಂಧಗಳಿಂದ ತಪ್ಪಿಸಿಕೊಳ್ಳುವಿಕೆ ಅಥವಾ ವ್ಯಾಪಾರದಲ್ಲಿ ಉದ್ದೇಶಪೂರ್ವಕ ಪಾಲ್ಗೊಳ್ಳುವಿಕೆಯನ್ನು ಅದಾನಿ ಸ್ಪಷ್ಟವಾಗಿ ನಿರಾಕರಿಸುತ್ತದೆ ಎಂದು ಹೇಳಿಕೆಯಲ್ಲಿ ವಾಲ್ಸ್ಟ್ರೀಟ್ ಜರ್ನಲ್ ಗೆ ತಿಳಿಸಿರುವ ಕಂಪೆನಿಯ ವಕ್ತಾರರು,‘ಅಲ್ಲದೆ ಈ ವಿಷಯದಲ್ಲಿ ಅಮೆರಿಕದಿಂದ ಅಧಿಕಾರಿಗಳಿಂದ ಯಾವುದೇ ತನಿಖೆಯ ಬಗ್ಗೆ ನಮಗೆ ಗೊತ್ತೂ ಇಲ್ಲ’ ಎಂದು ಹೇಳಿದ್ದಾರೆ.
ಪ್ರತಿಕ್ರಿಯೆಗಾಗಿ ಸುದ್ದಿಸಂಸ್ಥೆಯ ಮನವಿಗೆ ಅದಾನಿ, ಅಮೆರಿಕದ ನ್ಯಾಯ ಇಲಾಖೆ ಮತ್ತು ಬ್ರೂಕ್ಲಿನ್ನಲ್ಲಿರುವ ಯುಎಸ್ ಅಟಾರ್ನಿ ಕಚೇರಿ ತಕ್ಷಣಕ್ಕೆ ಸ್ಪಂದಿಸಿಲ್ಲ.
ಇರಾನಿನಿಂದ ತೈಲ ಅಥವಾ ಪೆಟ್ರೋಕೆಮಿಕಲ್ ಉತ್ಪನ್ನಗಳ ಎಲ್ಲ ಖರೀದಿಗಳನ್ನು ನಿಲ್ಲಿಸಬೇಕು ಮತ್ತು ಆ ದೇಶದಿಂದ ಯಾವುದನ್ನೂ ಖರೀದಿಸುವ ಯಾವುದೇ ದೇಶ ಅಥವಾ ವ್ಯಕ್ತಿ ತಕ್ಷಣ ದ್ವಿತೀಯ ನಿರ್ಬಂಧಗಳಿಗೆ ಒಳಪಡುತ್ತಾರೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಳೆದ ಮೇ ತಿಂಗಳಲ್ಲಿ ಹೇಳಿದ್ದರು.
ಅದಾನಿ ಮತ್ತು ಅವರ ಸೋದರ ಪುತ್ರ ಸಾಗರ ಅದಾನಿ ಅವರು ವಿದ್ಯುತ್ ಪೂರೈಕೆ ಒಪ್ಪಂದಗಳನ್ನು ಪಡೆಯಲು ಲಂಚಗಳನ್ನು ನೀಡಿದ್ದರು ಮತ್ತು ಅಮೆರಿಕದಲ್ಲಿ ನಿಧಿ ಸಂಗ್ರಹಣೆ ಸಮಯದಲ್ಲಿ ಅಮೆರಿಕನ್ ಹೂಡಿಕೆದಾರರನ್ನು ದಾರಿ ತಪ್ಪಿಸಿದ್ದರು ಎಂದು ಈ ಹಿಂದೆ ಅಮೆರಿಕದ ಅಧಿಕಾರಿಗಳು ದೋಷಾರೋಪ ಹೊರಿಸಿದ್ದರು.
ಆರೋಪಗಳನ್ನು ‘ಆಧಾರರಹಿತ’ ಎಂದು ಬಣ್ಣಿಸಿದ್ದ ಅದಾನಿ ಗ್ರೂಪ್, ಸಾಧ್ಯವಿರುವ ಎಲ್ಲ ಕಾನೂನು ಮಾರ್ಗಗಳನ್ನು ಬಳಸಿಕೊಳ್ಳುವುದಾಗಿ ಹೇಳಿತ್ತು.







