ಗಾಝಾ ಮೇಲೆ ದಾಳಿಯನ್ನು ತೀವ್ರಗೊಳಿಸಿದ ಇಸ್ರೇಲ್ : 53,000 ದಾಟಿದ ಒಟ್ಟು ಮೃತರ ಸಂಖ್ಯೆ

Photo | AFP
ಗಾಝಾ : ಶುಕ್ರವಾರ ಬೆಳಿಗ್ಗಿನಿಂದ ಗಾಝಾದಾದ್ಯಂತ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಕನಿಷ್ಠ 100 ಮಂದಿ ಫೆಲೆಸ್ತೀನ್ ನಾಗರಿಕರು ಮೃತಪಟ್ಟಿದ್ದಾರೆ ಮತ್ತು ಹಲವರು ಅವಶೇಷಗಳಡಿಯಲ್ಲಿ ಸಿಲುಕಿರುವ ಶಂಕೆಯಿದೆ ಆರೋಗ್ಯಾಧಿಕಾರಿಗಳು ತಿಳಿಸಿರುವ ಬಗ್ಗೆ Aljazeera ವರದಿ ಮಾಡಿದೆ.
2023ರ ಅಕ್ಟೋಬರ್ನಲ್ಲಿ ಇಸ್ರೇಲ್ ದಾಳಿಯನ್ನು ಪ್ರಾರಂಭಿಸಿದ ನಂತರ ಫೆಲೆಸ್ತೀನ್ನಲ್ಲಿ ಒಟ್ಟಾರೆ ಸಾವಿನ ಸಂಖ್ಯೆ 53,000ಕ್ಕಿಂತ ಹೆಚ್ಚಾಗಿದೆ. ಹಮಾಸ್ ದಾಳಿಯಲ್ಲಿ ಸುಮಾರು 1,200 ಇಸ್ರೇಲ್ ನಾಗರಿಕರು ಮೃತಪಟ್ಟಿದ್ದರು.
ಕಳೆದ ಮಂಗಳವಾರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಹಮಾಸ್ ವಿರುದ್ಧದ ಕಾರ್ಯಚರಣೆಯನ್ನು ಮುಂಬರುವ ದಿನಗಳಲ್ಲಿ ಪೂರ್ಣ ಬಲದೊಂದಿಗೆ ನಡೆಸಲಾಗುವುದುʼ ಎಂದು ಘೋಷಿಸಿದ್ದರು. ಇದರ ಬೆನ್ನಲ್ಲೇ ಈ ವೈಮಾನಿಕ ದಾಳಿ ನಡೆದಿದೆ.
ಗಾಝಾದ ಆರೋಗ್ಯ ಸಚಿವಾಲಯದ ಪ್ರಕಾರ, ಇಸ್ರೇಲ್ ಗಾಝಾ ನಡುವಿನ ಯುದ್ಧದಲ್ಲಿ ಕನಿಷ್ಠ 53,119 ಫೆಲೆಸ್ತೀನ್ ನಾಗರಿಕರು ಮೃತಪಟ್ಟಿದ್ದಾರೆ ಮತ್ತು1,19,919 ಜನರು ಗಾಯಗೊಂಡಿದ್ದಾರೆ. ಮಾರ್ಚ್ 2ರಿಂದ ಗಾಝಾಗೆ ಆಹಾರ, ಔಷಧಿ ಮತ್ತು ಇತರ ಎಲ್ಲಾ ಅಗತ್ಯ ವಸ್ತುಗಳು ಪ್ರವೇಶಿಸದಂತೆ ಇಸ್ರೇಲ್ ತಡೆ ನೀಡಿದೆ.
ದಕ್ಷಿಣ ಗಾಝಾದ ಖಾನ್ ಯೂನಿಸ್ ನಗರದಲ್ಲಿ ಬುಧವಾರ ರಾತ್ರಿಯಿಂದ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 54 ಮಂದಿ ಮೃತಪಟ್ಟಿರುವುದಾಗಿ ನಾಸೆರ್ ಆಸ್ಪತ್ರೆಯ ಮೂಲಗಳನ್ನು ಉಲ್ಲೇಖಿಸಿ `ಅಸೋಸಿಯೇಟೆಡ್ ಪ್ರೆಸ್' ವರದಿ ಮಾಡಿತ್ತು. ಇದಲ್ಲದೆ ಗಾಝಾ ನಗರ ಮತ್ತು ಉತ್ತರ ಗಾಝಾದ ಇತರ ಪ್ರದೇಶಗಳಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 26 ಜನರು ಮೃತಪಟ್ಟಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿತ್ತು.







