ತಮಿಳುನಾಡು | ಬೈಕ್ ನಲ್ಲಿ ತೆರಳುತ್ತಿದ್ದಾಗ ಆನೆ ದಾಳಿ : ಜರ್ಮನ್ ಪ್ರವಾಸಿಗ ಮೃತ್ಯು

Photo | X/@AnshithaPrincey
ಚೆನ್ನೈ: ಕೊಯಮತ್ತೂರಿನ ವಾಲ್ಪಾರೈ ಬಳಿಯ ಘಾಟಿ ರಸ್ತೆಯಲ್ಲಿ ಆನೆಯೊಂದು ಬೈಕ್ ನಲ್ಲಿ ತೆರಳುತ್ತಿದ್ದ ಜರ್ಮನ್ ಪ್ರವಾಸಿಗನ ಮೇಲೆ ದಾಳಿ ನಡೆಸಿದ್ದು, ಆತ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಮೃತ ವ್ಯಕ್ತಿಯನ್ನು ಜರ್ಮನ್ ಪ್ರಜೆ ಮೈಕೆಲ್(77) ಎಂದು ಗುರುತಿಸಲಾಗಿದೆ. ಮಂಗಳವಾರ ಸಂಜೆ ಈ ಘಟನೆ ನಡೆದಿದೆ.
ಈ ಕುರಿತ ವೀಡಿಯೊ ಕೂಡ ವೈರಲ್ ಆಗಿದೆ. ವೀಡಿಯೊದಲ್ಲಿ ವ್ಯಕ್ತಿಯೋರ್ವರು ಬೈಕ್ ನಲ್ಲಿ ವೇಗವಾಗಿ ಹೋಗುತ್ತಿರುವುದು ಕಾಣಬಹುದು. ಬೇರೆ ವಾಹನ ಸವಾರರು ಆನೆಯನ್ನು ನೋಡಿ ದೂರದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿದ್ದಾರೆ. ಜರ್ಮನ್ ಪ್ರವಾಸಿಗ ಆನೆಯಿಂದ ತಪ್ಪಿಸಲು ತನ್ನ ಬೈಕ್ ನ್ನು ರಸ್ತೆಯ ಬಲಭಾಗಕ್ಕೆ ತಿರುಗಿಸಿದ್ದಾನೆ. ಈ ವೇಳೆ ಆತನನ್ನು ಬೆನ್ನಟ್ಟಿ ಕಾಡಾನೆ ದಾಳಿ ನಡೆಸಿದೆ.
ಈ ವೇಳೆ ಅಲ್ಲಿದ್ದ ಹಲವರು ವೀಡಿಯೊವನ್ನು ಚಿತ್ರೀಕರಿಸಿದ್ದಾರೆ. ಜರ್ಮನ್ ಪ್ರವಾಸಿಗ ಬೈಕ್ ನ್ನು ಬಿಟ್ಟು ಕಾಡಿನೊಳಗೆ ಓಡಿಹೋದರೂ ಬಿಡದೆ ಆತನ ಮೇಲೆ ಆನೆ ದಾಳಿ ನಡೆಸಿದೆ ಎಂದು ಪ್ರತ್ಯಕ್ಷದರ್ಶಿಯೋರ್ವರು ತಿಳಿಸಿದ್ದಾರೆ.
ಆನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ. ಆನೆ ದಾಳಿ ಘಟನೆಯ ವೀಡಿಯೊ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದ ಬಳಕೆದಾರರು ಈ ಕುರಿತು ವ್ಯಾಪಕವಾದ ಆಕ್ರೋಶ ವ್ಯಕ್ತಪಡಿಸಿದ್ದಾರೆ.