ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಮರಣದಂಡನೆ | ಆರೋಪಿಯ ಕ್ಷಮಾದಾನ ಅರ್ಜಿ ತಿರಸ್ಕರಿಸಿದ ರಾಷ್ಟ್ರಪತಿ

ದ್ರೌಪದಿ ಮುರ್ಮು | Photo Credit : PTI
ಹೊಸದಿಲ್ಲಿ,ಡಿ.15: ಮಹಾರಾಷ್ಟ್ರದಲ್ಲಿ 2012ರಲ್ಲಿ ಎರಡು ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರಗೈದ ಪ್ರಕರಣದಲ್ಲಿ ಮರಣದಂಡನೆಗೆ ಘೋಷಿಸಲ್ಪಟ್ಟ ವ್ಯಕ್ತಿಯ ಕ್ಷಮಾದಾನದ ಅರ್ಜಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ತಿರಸ್ಕರಿಸಿದ್ದಾರೆ.
ರಾಷ್ಟ್ರಪತಿಯಾಗಿ 2022ರ ಜುಲೈ 25ರಂದು ಅಧಿಕಾರ ಸ್ವೀಕರಿಸಿದ ಬಳಿಕ ಮುರ್ಮು ಅವರು ತಿರಸ್ಕರಿಸಿದ ಮೂರನೇ ಕ್ಷಮಾದಾನದ ಅರ್ಜಿ ಇದಾಗಿದೆ.
ಬಾಲಕಿಯನ್ನು ಅಪಹರಿಸಿ, ಆಕೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪದಲ್ಲಿ ಸುಪ್ರೀಂಕೋರ್ಟ್ 2019ರ ಆಕ್ಟೋಬರ್ 3ರಂದು ರವಿ ಅಶೋಕ್ ಘುಮಾರೆಗೆ ಮರಣದಂಡನೆಯನ್ನು ಘೋಷಿಸಿತ್ತು.
‘‘ಇನ್ನಷ್ಟೇ ಅರಳಬೇಕಾಗಿದ್ದ ಜೀವವೊಂದನ್ನು ನಿರ್ದಯವಾಗಿ ಆರೋಪಿಯು ಅಂತ್ಯಗೊಳಿಸಿದ್ದಾನೆ. ಎರಡು ವರ್ಷದ ಮಗುವಿನ ಮೇಲೂ ಈ ಅಸಹಜವಾದ ಕೃತ್ಯವನ್ನು ಎಸಗಿರುವುದು ಆತನ ಕೊಳಕು ಹಾಗೂ ವಿಕೃತ ಮನಸ್ಥಿತಿಯನ್ನು ತೋರಿಸಿದೆ ಮತ್ತು ಬರ್ಬರತೆಯ ಭಯಾನಕ ಕಥೆಯನ್ನು ತೆರೆದಿಟ್ಟಿದೆ’’ ಎಂದು ಆಗಿನ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನೊಳಗೊಂಡ ತ್ರಿಸದಸ್ಯ ನ್ಯಾಯಪೀಠ 2:1ರ ಬಹುಮತದ ತೀರ್ಪು ನೀಡಿತ್ತು.
ಘುಮಾರೆಯ ಕ್ಷಮಾದಾನ ಕೋರಿಕೆಯ ಅರ್ಜಿಯನ್ನು ರಾಷ್ಟ್ರಪತಿಯವರು 2025ರ ನವೆಂಬರ್ 6ರಂದು ತಿರಸ್ಕರಿಸಿದ್ದಾರೆಂದು ರಾಷ್ಟ್ರಪತಿ ಭವನವು ರವಿವಾರ ಬಹಿರಂಗಪಡಿಸಿದೆ.







