'ವೋಟ್ ಚೋರಿ'ಯಂತಹ ಪದಗುಚ್ಛಗಳನ್ನು ಬಳಸುವುದು ಮತದಾರರು, ಚುನಾವಣಾ ಸಿಬ್ಬಂದಿ ಮೇಲಿನ ದಾಳಿ: ಚುನಾವಣಾ ಆಯೋಗ

Photo credit: PTI
ಹೊಸದಿಲ್ಲಿ: ದೇಶದಲ್ಲಿ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಎಂದು ವಿರೋಧ ಪಕ್ಷಗಳ ಆರೋಪದ ಮಧ್ಯೆ "ವೋಟ್ ಚೋರಿ"ಯಂತಹ ಪದಗುಚ್ಛಗಳನ್ನು ಬಳಸುವುದು ಮತದಾರರ ಮೇಲಿನ ದಾಳಿ ಮಾತ್ರವಲ್ಲದೆ, ಲಕ್ಷಾಂತರ ಚುನಾವಣಾ ಸಿಬ್ಬಂದಿಯ ಸಮಗ್ರತೆಯ ಮೇಲಿನ ದಾಳಿಯಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.
1951-1952ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಿಂದಲೂ ಒಬ್ಬ ವ್ಯಕ್ತಿಗೆ ಒಂದು ಮತ ಎಂಬ ತತ್ವ ಅಸ್ತಿತ್ವದಲ್ಲಿದೆ. ಭಾರತದ ಎಲ್ಲಾ ಮತದಾರರನ್ನು 'ಚೋರ್' ಎಂದು ಬಣ್ಣಿಸುವ ಬದಲು ಯಾವುದೇ ವ್ಯಕ್ತಿ ಯಾವುದೇ ಚುನಾವಣೆಯಲ್ಲಿ ಎರಡು ಬಾರಿ ಮತ ಚಲಾಯಿಸಿರುವುದಕ್ಕೆ ಯಾರ ಬಳಿಯಾದರೂ ಯಾವುದೇ ಪುರಾವೆ ಇದ್ದರೆ ಅದನ್ನು ಅಫಿಡವಿಟ್ನೊಂದಿಗೆ ಸಲ್ಲಿಸಬೇಕು ಎಂದು ಚುನಾವಣಾ ಆಯೋಗ ಹೇಳಿದೆ.
ಆಗಸ್ಟ್ 7ರಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ʼಮತಗಳ ಕಳ್ಳತನʼ ನಡೆದಿರುವ ಬಗ್ಗೆ ಪುರಾವೆ ಸಹಿತ ಆರೋಪಿಸಿದ್ದರು. ಈ ಹಿನ್ನೆಲೆ ಚುನಾವಣಾ ಆಯೋಗ ಈ ಹೇಳಿಕೆಯನ್ನು ನೀಡಿದೆ ಎಂದು ವರದಿಯಾಗಿದೆ.





