ಒಕ್ಕಲೆಬ್ಬಿಸಿದ ಮುಸ್ಲಿಮರಿಗೆ ಆಶ್ರಯ ಕೊಡಬೇಡಿ: ಅಸ್ಸಾಂ ಸಿಎಂ ಹಿಮಂತ ಬಿಸ್ವ ಎಚ್ಚರಿಕೆ

ಹಿಮಂತ ಬಿಸ್ವ ಶರ್ಮ | PTI
ಗುವಾಹಟಿ: ಅರಣ್ಯ ಪ್ರದೇಶಗಳು ಹಾಗೂ ಸರಕಾರಿ ಭೂಮಿಯಲ್ಲಿ ನೆಲೆಸಿರುವ ಬಂಗಾಳಿ ಭಾಷೆ ಮಾತನಾಡುವ ಮುಸ್ಲಿಮರ ಒಕ್ಕಲೆಬ್ಬಿಸುವ ಕಾರ್ಯಾಚರಣೆಗೆ ಚಾಲನೆ ನೀಡಿರುವ ಬೆನ್ನಿಗೇ, ಸ್ಥಳೀಯರು ಒಕ್ಕಲೆಬ್ಬಿಸಿದ ಮುಸ್ಲಿಮರಿಗೆ ಆಶ್ರಯ ಒದಗಿಸಬಾರದು ಎಂದು ಸೋಮವಾರ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಹಿಮಂತ ಬಿಸ್ವ ಶರ್ಮ, “ನಮ್ಮ ಜನರಿಗೆ ಈಗ ಹಿಂದೆಂದಿಗಿಂತ ಹೆಚ್ಚು ಜಾಗೃತಿಯುಂಟಾಗಿದೆ. ನಮ್ಮ ಜನ ಅವರೊಂದಿಗೆ ಹೆಚ್ಚು ಸಹಕರಿಸುತ್ತಾರೆ ಎಂದು ನನಗನ್ನಿಸುವುದಿಲ್ಲ. ಅವರು ಎಲ್ಲಿಂದ ಬಂದರೋ ಅಲ್ಲಿಗೇ ಮರಳಬೇಕು ಎಂಬುದು ನನ್ನ ಬಯಕೆಯಾಗಿದೆ. ಅದಕ್ಕೆ ನನ್ನ ಯಾವ ತಕರಾರೂ ಇಲ್ಲ. ಆದರೆ, ನಮ್ಮ ಜನ ಅವರಿಗೆ ಆಶ್ರಯ ನೀಡಬಾರದು. ಇಲ್ಲದಿದ್ದರೆ ಪರಿಸ್ಥಿತಿ ಮತ್ತೊಮ್ಮೆ ಹದಗೆಡಲಿದೆ” ಎಂದು ಎಚ್ಚರಿಸಿದ್ದಾರೆ.
“ಒಕ್ಕಲೆಬ್ಬಿಸುವುದು ಹಾಗೂ ಇನ್ನಿತರ ಕ್ರಿಯೆಗಳ ಮೂಲಕ ನಾವು ನಮ್ಮ ಪರಿಸ್ಥಿತಿಯನ್ನು ಸುಧಾರಿಸಿದ್ದೇವೆ” ಎಂದು ಒಕ್ಕಲೆಬ್ಬಿಸಿದ ಸ್ಥಳಗಳ ಬಳಿ ತೆರವುಗೊಂಡ ಜನರು ಆಶ್ರಯ ಪಡೆಯುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ.
ನಮ್ಮ ಜನ ಎಂದು ಅವರು ಯಾರ ಕುರಿತು ಉಲ್ಲೇಖಿಸಿದ್ದಾರೆ ಎಂಬುದನ್ನು ಅವರು ನಿರ್ದಿಷ್ಟವಾಗಿ ಹೇಳದಿದ್ದರೂ, ನೆರೆಯ ಬಾಂಗ್ಲಾದೇಶದ ಅಕ್ರಮ ವಲಸಿಗರು ಎಂದು ಬಿಜೆಪಿ ಪರಿಗಣಿಸಿರುವ ಬಂಗಾಳಿ ಭಾಷಿಕ ಮುಸ್ಲಿಮರನ್ನು ಹೊರತುಪಡಿಸಿ ಉಳಿದೆಲ್ಲ ಸ್ಥಳೀಯರನ್ನು ಅವರು ನಮ್ಮ ಜನರು ಎಂದು ಉಲ್ಲೇಖಿಸಿದ್ದಾರೆ ಎಂದು ಸರಕಾರದ ಆಂತರಿಕ ಮೂಲಗಳು ಹೇಳಿವೆ.
“ಇನ್ನೂ ದೊಡ್ಡ ಪ್ರಮಾಣದ ಭೂಮಿ ಅಕ್ರಮ ವಶದಲ್ಲಿದೆ. 29 ಲಕ್ಷ ಬಿಘಾ ಭೂಮಿಗಿಂತ ಹೆಚ್ಚು ಭೂಮಿ ಈಗಲೂ ಅಕ್ರಮ ವಶದಲ್ಲಿದೆ. ಹೀಗಾಗಿ ಇದು ಸಾಕಷ್ಟು ಸಮಯ ತೆಗೆದುಕೊಳ್ಳಲಿದ್ದು, ಇನ್ನೂ ಸಾಕಷ್ಟು ಕೆಲಸ ಮಾಡುವುದು ಬಾಕಿ ಇದೆ. ಒಂದು ವೇಳೆ ಜನರು ಸಹಕರಿಸಿದರೆ, ನಾವು ನಮ್ಮ ಸಮುದಾಯಗಳನ್ನು ರಕ್ಷಿಸುವ ಕೆಲಸವನ್ನು ಮಾಡುವುದು ಸಾಧ್ಯಲವಾಗಲಿದೆ” ಎಂದು ಅವರು ಹೇಳಿದ್ದಾರೆ.
“ನಮ್ಮ ಜನರು ಭೂಮಿಯ ಪಟ್ಟಾಗಾಗಿ ಅಳುತ್ತಿದ್ದಾರೆ. ಆದರೆ, ಅವರು ಸರಕಾರದ 300ರಿಂದ 400 ಬಿಘಾ ಭೂಮಿಯನ್ನು ಆಕ್ರಮಿಸಿಕೊಂಡಿದ್ದಾರೆ” ಎಂದೂ ಅವರು ಆರೋಪಿಸಿದ್ದಾರೆ.
►ಎಐಯುಡಿಎಫ್ ಪ್ರತಿಭಟನೆ
ಒಕ್ಕಲೆಬ್ಬಿಸುವ ಕಾರ್ಯಾಚರಣೆಯ ಮೂಲಕ ಬಿಜೆಪಿ ನೇತೃತ್ವದ ಸರಕಾರವು ಭಾರತೀಯ ಮುಸ್ಲಿಮರಿಗೆ ಕಿರುಕುಳ ನೀಡುತ್ತಿದೆ ಎಂದು ಬದ್ರುದ್ದೀನ್ ಅಜ್ಮಲ್ ನೇತೃತ್ವದ ಎಐಯುಡಿಎಫ್ ಪ್ರತಿಭಟನೆ ನಡೆಸಿದ ಬೆನ್ನಿಗೇ ಹಿಮಂತ ಬಿಸ್ವ ಶರ್ಮರಿಂದ ಈ ಹೇಳಿಕೆ ಹೊರಬಿದ್ದಿದೆ.
“ನಮ್ಮ ಅರಣ್ಯಗಳನ್ನು ಅಡಿಕೆ ತೋಟ ಹಾಗೂ ಮೀನುಗಾರಿಕೆ ಪ್ರದೇಶವನ್ನಾಗಿ ಮಾರ್ಪಡಿಸುವ ಮೂಲಕ ಅವರು ನಮಗೆ ಕಿರುಕುಳ ನೀಡುತ್ತಿದ್ದಾರೆ. ಲವ್ ಜಿಹಾದ್ ಅನ್ನು ಯಾರು ಮಾಡುತ್ತಿದ್ದಾರೆ? ಅದು ನಮಗಾಗುತ್ತಿದೆ. ಭೂಮಿ ಜಿಹಾದ್ ಮಾಡಿರುವವರು ಯಾರು? ಅದು ನಮಗಾಗುತ್ತಿದೆ. ಅಳಬೇಕಾದವರು ನಾವಾಗಿದ್ದರೂ, ಅವರು ಕಣ್ಣೀರು ಹಾಕುತ್ತಿದ್ದಾರೆ” ಎಂದು ಹಿಮಂತ ಬಿಸ್ವ ಶರ್ಮ ವ್ಯಂಗ್ಯವಾಡಿದ್ದಾರೆ.
ಮೇ 2021ರಲ್ಲಿ ತಾನು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ಇಲ್ಲಿಯವರೆಗೆ 1.29 ಬಿಘಾ (42,500 ಎಕರೆಗೂ ಹೆಚ್ಚು) ಭೂಮಿಯನ್ನು ಅತಿಕ್ರಮಣದಿಂದ ಮುಕ್ತಗೊಳಿಸಲಾಗಿದೆ. ತೆರವು ಕಾರ್ಯಾಚರಣೆಯನ್ನು ಧುಬ್ರಿ, ಗೋಲ್ಪಾರ್, ಲಕ್ಷ್ಮಿಪುರ್ ಹಾಗೂ ಗೋಲಾಘಾಟ್ ಜಿಲ್ಲೆಗಳಲ್ಲಿ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇನ್ನೂ ಹಲವರಿಗೆ ತೆರವು ಕಾರ್ಯಾಚರಣೆಯ ನೋಟಿಸ್ ಅನ್ನು ಜಾರಿಗೊಳಿಸಲಾಗಿದೆ. ಒಕ್ಕಲೆಬ್ಬಿಸಿರುವ ಬಹುತೇಕರಿಗೆ ತಮ್ಮ ತವರು ಜಿಲ್ಲೆಗಳಲ್ಲಿ ಭೂಮಿಯಿದ್ದರೂ, ಮೂಲನಿವಾಸಿಗಳ ಮೇಲೆ ಭೌಗೋಳಿಕ ಆಕ್ರಮಣ ನಡೆಸಲು ಇನ್ನಿತರ ಜಿಲ್ಲೆಗಳಲ್ಲಿ ಅವರು ಭೂಮಿಯನ್ನು ಅತಿಕ್ರಮಣ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಸೌಜನ್ಯ: deccanherald.com







