ಗೋವಾ ನೈಟ್ಕ್ಲಬ್ ಮಾಲಕರ ಗಡೀಪಾರು ಸನ್ನಿಹಿತ : ಇಂದು ದೆಹಲಿಗೆ

PC | timesofindia
ಹೊಸದಿಲ್ಲಿ: ಡಿ. 6ರಂದು ಗೋವಾದಲ್ಲಿ ಭೀಕರ ಅಗ್ನಿದುರಂತ ಸಂಭವಿಸಿದ ನೈಟ್ಕ್ಲಬ್ ನ ಮಾಲಕರಾದ ಸೌರಭ್ ಮತ್ತು ಗೌರವ್ ಲೂತ್ರಾ ಅವರನ್ನು ಥಾಯ್ಲೆಂಡ್ ನಿಂದ ಗಡೀಪಾರು ಮಾಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಮಂಗಳವಾರ ಹೊಸದಿಲ್ಲಿಗೆ ಕರೆತರುವ ನಿರೀಕ್ಷೆ ಇದೆ.
25 ಮಂದಿಯ ಸಜೀವ ದಹನಕ್ಕೆ ಕಾರಣವಾಗಿದ್ದ ದುರಂತ ಸಂಭವಿಸಿದ ಬೆನ್ನಲ್ಲೇ ಮಾಲಕರಾದ ಲೂತ್ರಾ ಸಹೋದರರು ಥಾಯ್ಲೆಂಡಿಗೆ ಪಲಾಯನ ಮಾಡಿದ್ದರು. ಇಬ್ಬರು ಆರೋಪಿಗಳನ್ನು ಮಧ್ಯಾಹ್ನ 1.45ರ ವೇಳೆಗೆ ಬ್ಯಾಂಕಾಕ್ ನಿಂದ ಇಂಡಿಗೋ ವಿಮಾನದಲ್ಲಿ ದೆಹಲಿಗೆ ಕರೆತರಲಾಗುವುದು ಎಂದು ಉನ್ನತ ಮೂಲಗಳು ತಿಳಿಸಿವೆ. ದೆಹಲಿ ಅಪರಾಧ ವಿಭಾಗ ಮತ್ತು ಗೋವಾ ಪೊಲೀಸರು ಆರೋಪಿಗಳನ್ನು ಪಾಟಿಯಾಲಾ ಹೌಸ್ ಕೋರ್ಟ್ನಲ್ಲಿ ಹಾಜರುಪಡಿಸುವ ನಿರೀಕ್ಷೆ ಇದೆ. ಮಂಗಳವಾರ ರಾತ್ರಿ ಗೋವಾಗೆ ಕರೆದೊಯ್ಯಲಾಗುವುದು ಎಂದು ಗೋವಾ ಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.
ಗಡೀಪಾರು ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಸಿಬಿಐ ಮತ್ತು ಗುಪ್ತಚರ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತಂಡ ಶನಿವಾರ ಫುಕೆಟ್ಗೆ ತೆರಳಿತ್ತು. ಅಗ್ನಿದುರಂತ ಸಂಭವಿಸಿದ ಬ್ರಿಚ್ ಬೈ ರೋಮಿಯೊ ಲೇನ್ನಲ್ಲಿ ಬೆಂಕಿ ನಂದಿಸಲು ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಹೆಣಗಾಡುತ್ತಿದ್ದರೆ, ಆರೋಪಿ ಸಹೋದರರು ದೆಹಲಿಯಿಂದ ಥಾಯ್ಲೆಂಡ್ಗೆ ಪಲಾಯನ ಮಾಡಿದ್ದರು. ಘಟನೆಯ ಬೆನ್ನಲ್ಲೇ ದೆಹಲಿ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿಯಿಂದ ಉಭಯ ಆರೋಪಿಗಳಿಗೆ ಶೋಕಾಸ್ ನೀಡಿ ಏಳು ದಿನಗಳ ಒಳಗಾಗಿ ಪಾಸ್ಪೋರ್ಟ್ಗಳನ್ನು ಏಕೆ ಮುಟ್ಟುಗೋಲು ಹಾಕಿಕೊಳ್ಳಬಾರದು ಎಂಬ ಬಗ್ಗೆ ವಿವರಣೆ ನೀಡುವಂತೆ ಸೂಚಿಸಲಾಗಿತ್ತು.
ಈ ನೋಟಿಸ್ ನೀಡಿಕೆ ಬಳಿಕ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪಾಸ್ಪೋರ್ಟ್ಗಳನ್ನು ವಶಪಡಿಸಿಕೊಳ್ಳುತ್ತದೆ. ಅಂದರೆ ಥಾಯ್ಲೆಂಡ್ನಲ್ಲಿ ಅಧಿಕೃತ ಪ್ರವಾಸ ದಾಖಲೆಗಳಿಲ್ಲದೇ ಅವರು ನೆಲೆಸುವಂತಾಗುತ್ತದೆ.







