ಗೋವಾ ನೈಟ್ಕ್ಲಬ್ ಅಗ್ನಿ ದುರಂತ| ಲೂಥ್ರಾ ಸೋದರರ ನಿವಾಸದ ಮೇಲೆ ಈ.ಡಿ.ದಾಳಿ

Photo Credit : PTI
ಹೊಸದಿಲ್ಲಿ,ಜ.23: ಜಾರಿ ನಿರ್ದೇಶನಾಲಯವು (ಈ.ಡಿ.) ಶುಕ್ರವಾರ ಬೆಳಿಗ್ಗೆಯಿಂದ ಗೋವಾದ ಆರ್ಪೋರಾದಲ್ಲಿಯ ಬಿರ್ಚ್ ಬೈ ರೋಮಿಯೊ ಲೇನ್ನ ಮಾಲಿಕರಾದ ಲೂಥ್ರಾ ಸೋದರರು ಮತ್ತು ಅಜಯ ಗುಪ್ತಾ ಅವರ ನಿವಾಸಗಳು ಮತ್ತು ಕಚೇರಿಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸುತ್ತಿದೆ.
2025ರ ಡಿ.6ರಂದು ಪಾರ್ಟಿಯೊಂದರಲ್ಲಿ ಸಂಭವಿಸಿದ್ದ ಬೆಂಕಿ ಅವಘಢದಲ್ಲಿ 25 ಜನರು ಮೃತಪಟ್ಟು, 50 ಜನರು ಗಾಯಗೊಂಡಿದ್ದ ಹಿನ್ನೆಲೆಯಲ್ಲಿ ಕ್ಲಬ್ನ ಅಕ್ರಮ ಕಾರ್ಯಾಚರಣೆ ಮತ್ತು ಪ್ರವರ್ತಕರ ವಿರುದ್ಧ ದಾಖಲಿಸಿಕೊಳ್ಳಲಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ.ಡಿ.ತನಿಖೆ ನಡೆಸುತ್ತಿದೆ.
ಗೋವಾ ಮತ್ತು ದಿಲ್ಲಿಯಾದ್ಯಂತ ಒಂಭತ್ತು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಗಳು ನಡೆಯುತ್ತಿವೆ. ಇವುಗಳಲ್ಲಿ ದಿಲ್ಲಿಯ ಕಿಂಗ್ಸ್ವೇ ಕ್ಯಾಂಪ್,ಗುರುಗ್ರಾಮದ ತತ್ವಂ ವಿಲ್ಲಾಸ್,ಗೋವಾದಲ್ಲಿಯ ಹಿಂದಿನ ಆರ್ಪೋರಾ ಸರಪಂಚ ರೋಶನ ರೇಡ್ಕರ್ ಮತ್ತು ಪಂಚಾಯತ್ ಕಾರ್ಯದರ್ಶಿ ರಘುವೀರ ಬಾಗಕರ್ ಅವರ ನಿವಾಸಗಳು ಸೇರಿವೆ. ರೇಡ್ಕರ್ ಮತ್ತು ಬಾಗಕರ್ ನೈಟ್ಕ್ಲಬ್ಗೆ ಅಕ್ರಮವಾಗಿ ವ್ಯವಹಾರ ಪರವಾನಿಗೆಗಳು ಮತ್ತು ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು ನೀಡಿದ್ದರು ಎಂದು ಆರೋಪಿಸಿಲಾಗಿದೆ.
ಬಿರ್ಚ್ ಬೈ ರೋಮಿಯೊ ಲೇನ್ ಇರುವ ಖಝಾನ್ ಭೂಮಿಯ ಅಕ್ರಮ ಪರಿವರ್ತನೆಯಿಂದಾಗಿ ಉದ್ಭವಿಸಿರುವ ಅಕ್ರಮ ಹಣ ವರ್ಗಾವಣೆ ಕುರಿತು ಪರಿಶೀಲಿಸಲು ಈ.ಡಿ.ತಂಡಗಳು ಕ್ಲಬ್ನ ಮಾಲಿಕರಲ್ಲಿ ಒಬ್ಬರೆನ್ನಲಾದ ಬ್ರಿಟಿಷ್ ಪ್ರಜೆ ಸುರಿಂದರ್ ಕುಮಾರ್ ಖೋಸ್ಲಾ ಅವರ ನಿವಾಸದಲ್ಲಿಯೂ ಶೋಧ ಕಾರ್ಯಾಚರಣೆ ನಡೆಸುತ್ತಿವೆ.







