ಮಹಿಳಾ ಮೀಸಲಾತಿಯನ್ನು ಜಾರಿಗೆ ತರಲು ದೇವರು ನನ್ನನ್ನು ಆಯ್ಕೆ ಮಾಡಿದ್ದಾನೆ: ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ (PTI)
ಹೊಸದಿಲ್ಲಿ: ಹೊಸ ಸಂಸತ್ ಭವನದ ಸೆಂಟ್ರಲ್ ಹಾಲ್ನಲ್ಲಿ ಸಂಸದರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನೀತಿ ನಿರೂಪಣೆಯಲ್ಲಿ ಮಹಿಳೆಯರು ದೊಡ್ಡ ಪಾತ್ರವನ್ನು ವಹಿಸುತ್ತಾರೆ ಎಂದು ಹೇಳಿದ್ದಾರೆ.
ಮಹಿಳಾ ಮೀಸಲಾತಿ ಮಸೂದೆ ಕುರಿತು ಮಾತನಾಡಿದ ಅವರು, ಇದನ್ನು ಜಾರಿಗೆ ತರಲು ದೇವರು ತನ್ನನ್ನು ಆಯ್ಕೆ ಮಾಡಿದ್ದಾನೆ ಎಂದು ಬಣ್ಣಿಸಿದ್ದಾರೆ. .
"ಮಹಿಳಾ ಮೀಸಲಾತಿ ಮಸೂದೆಯ ಕುರಿತು ಸುದೀರ್ಘ ಚರ್ಚೆ ನಡೆದಿದೆ. ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಹಲವಾರು ಬಾರಿ ಮಂಡಿಸಲಾಯಿತು ಆದರೆ ಮಸೂದೆಯನ್ನು ಅಂಗೀಕರಿಸಲು ಸಾಕಷ್ಟು ಬಹುಮತ ಇರಲಿಲ್ಲ, ಈ ಕಾರಣದಿಂದಾಗಿ, ಈ ಕನಸು ಅಪೂರ್ಣವಾಗಿತ್ತು, ಇಂದು ದೇವರೇ, ಇದನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ನನಗೆ ಅವಕಾಶವನ್ನು ನೀಡಿದ್ದಾನೆ. ನಮ್ಮ ಸರ್ಕಾರ ಇಂದು ಉಭಯ ಸದನಗಳಲ್ಲಿ ಮಹಿಳೆಯರ ಮೀಸಲಾತಿಯ ಕುರಿತು ಹೊಸ ಮಸೂದೆಯನ್ನು ತರುತ್ತಿದೆ" ಎಂದು ಪ್ರಧಾನಿ ಮೋದಿ ಹೇಳಿದರು.
ಮಹಿಳಾ ಮೀಸಲಾತಿ ಮಸೂದೆ ಮಂಡನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದ ಬೆನ್ನಲ್ಲೇ ಮಂಗಳವಾರ ಹೊಸ ಸಂಸತ್ ಭವನದಲ್ಲಿ ಈ ಮಸೂದೆಯನ್ನು ಮಂಡಿಸಲಾಯಿತು. ಕಾನೂನು ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಮಸೂದೆ ಮಂಡಿಸಿದರು.