ಹೊಣೆಗಾರಿಕೆಗಳಲ್ಲಿ ಶೇ.930ರಷ್ಟು ಏರಿಕೆ ; ಹೊಳಪು ಕಳೆದುಕೊಂಡ ಸರಕಾರದ ಚಿನ್ನದ ಬಾಂಡ್ಗಳ ಯೋಜನೆ

Photo : upstox.com
ಹೊಸದಿಲ್ಲಿ : ಚಿನ್ನದ ಆಮದನ್ನು ಕಡಿಮೆ ಮಾಡಲು ಜಾರಿಗೆ ತರಲಾಗಿದ್ದ ಸಾವರಿನ್ ಗೋಲ್ಡ್ ಬಾಂಡ್ (ಎಸ್ಜಿಬಿ) ಅಥವಾ ಸಾರ್ವಭೌಮ ಚಿನ್ನದ ಬಾಂಡ್ ಯೋಜನೆಯಲ್ಲಿ ಸರಕಾರದ ಲೆಕ್ಕಾಚಾರ ಹಳಿ ತಪ್ಪಿದೆ. 2023-24ರ ವೇಳೆಗೆ ಈ ಸಾಲದ ಮೇಲಿನ ಸರಕಾರದ ಹೊಣೆಗಾರಿಕೆಗಳಲ್ಲಿ ಶೇ.930ರಷ್ಟು ಹೆಚ್ಚಳವಾಗಿದ್ದು, ಚಿನ್ನದ ಆಮದುಗಳ ಮೇಲಿನ ಸುಂಕವನ್ನು ತಗ್ಗಿಸುವ ಮತ್ತು ಹೊಸದಾಗಿ ಬಾಂಡ್ಗಳ ವಿತರಣೆಯನ್ನು ನಿಲ್ಲಿಸುವ ಮೂಲಕ ಈ ಹೊರೆಯನ್ನು ತಗ್ಗಿಸಲು ಸರಕಾರವು ಹರಸಾಹಸ ಪಡುತ್ತಿದೆ.
ಸರಕಾರಿ ವ್ಯಾಪಾರ ದತ್ತಾಂಶಗಳು ಮತ್ತು ಅದರ ಬಜೆಟ್ ದಾಖಲೆಗಳ ವಿಶ್ಲೇಷಣೆಯು ಎಸ್ಜಿಬಿಗಳ ಮೇಲಿನ ಕೇಂದ್ರದ ಹೊಣೆಗಾರಿಕೆಗಳು ತ್ವರಿತವಾಗಿ ಹೆಚ್ಚುತ್ತಿದ್ದರೂ ತುಲನಾತ್ಮಕವಾಗಿ ಈ ಬಾಂಡ್ಗಳಿಂದ ಅದರ ಸ್ವೀಕೃತಿಗಳು ಕಡಿಮೆಯಿವೆ ಎನ್ನುವುದನ್ನು ತೋರಿಸಿದೆ.
ಎಸ್ಜಿಬಿ ಯೋಜನೆಯ ಉದ್ದೇಶಗಳಲ್ಲಿ ಒಂದಾಗಿದ್ದ ದೇಶದ ಆಮದನ್ನು ತಗ್ಗಿಸಲು ಬಾಂಡ್ಗಳಿಗೆ ಸಾಧ್ಯವಾಗಿಲ್ಲ.
ಮಾರುಕಟ್ಟೆ ಅಂದಾಜಿನಂತೆ 2032ರ ವೇಳೆಗೆ 1.12 ಲಕ್ಷ ಕೋಟಿ ರೂ.ಗಳಿಗೆ ಬೆಳೆಯಬಹುದಾದ ಹೊಣೆಗಾರಿಕೆಗಳು ಹೆಚ್ಚಲು ಎಸ್ಜಿಬಿ ಯೋಜನೆಯ ವಿನ್ಯಾಸ ಮತ್ತು ಜುಲೈ 2022ರ ವೇಳೆಗೆ ಚಿನ್ನದ ಆಮದು ಸುಂಕಗಳನ್ನು ಶೇ.15ಕ್ಕೆ ಹೆಚ್ಚಿಸಿದ್ದಂತಹ ಸರಕಾರದ ಕ್ರಮಗಳು ಭಾಗಶಃ ಕಾರಣಗಳಾಗಿವೆ.
ಈ ನಡುವೆ ಎಸ್ಜಿಬಿ ಯೋಜನೆಯ ರೂಪುರೇಷೆಗಳ ಬಗ್ಗೆ ಪ್ರಧಾನಿ ಕಚೇರಿ ಮತ್ತು ವಿತ್ತ ಸಚಿವಾಲಯದಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ ಎನ್ನಲಾಗಿದೆ.
ಸರಕಾರವು 2015ರಲ್ಲಿ ಆರಂಭಿಸಿದ್ದ ಎಸ್ಜಿಬಿ ಯೋಜನೆಯಡಿ ಜನರು ಭೌತಿಕ ಚಿನ್ನದ ಬದಲಿಗೆ ಚಿನ್ನದ ಬಾಂಡ್ಗಳನ್ನು ಖರೀದಿಸಬಹುದು. ಬಾಂಡ್ಗಳನ್ನು ಹೊಂದಿರಬೇಕಾದ ಕನಿಷ್ಠ ಐದು ವರ್ಷಗಳ ಅವಧಿಯಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆಯಾದರೆ ಅವರು ತಮ್ಮ ಹೂಡಿಕೆಯ ಮೇಲೆ ಆದಾಯ ಗಳಿಸುತ್ತಾರೆ. ಬಾಂಡ್ಗಳ ಪೂರ್ಣ ಪಕ್ವತಾ ಅವಧಿ ಎಂಟು ವರ್ಷಗಳಾಗಿವೆ. ಇದರ ಜೊತೆಗೆ ಜನರಿಗೆ ತಮ್ಮ ಹೂಡಿಕೆಯ ಮೇಲೆ ಶೇ.2.5ರಷ್ಟು ಬಡ್ಡಿಯು ದೊರೆಯುತ್ತದೆ ಮತ್ತು ಅದನ್ನು ಪ್ರತಿ ಆರು ತಿಂಗಳಿಗೊಮ್ಮೆ ಪಾವತಿಸಲಾಗುತ್ತದೆ.
ಈ ವರ್ಷದ ಫೆ.1ರಂದು ಬಜೆಟ್ ಮಂಡನೆ ಬಳಿಕ ಸುದ್ದಿಗೋಷ್ಠಿಯಲ್ಲಿ ಸರಕಾರವು ಎಸ್ಜಿಬಿ ಯೋಜನೆಯನ್ನು ಸ್ಥಗಿತಗೊಳಿಸುತ್ತಿದೆಯೇ ಎಂಬ ಪ್ರಶ್ನೆಗೆ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ‘ಹೌದು,ಒಂದು ರೀತಿಯಲ್ಲಿ’ ಎಂದು ಉತ್ತರಿಸಿದ್ದರು.
ಅದೇ ಸುದ್ದಿಗೋಷ್ಠಿಯಲ್ಲಿ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅಜಯ್ ಸೇಠ್ ಅವರು ಸರಕಾರವು ಎಸ್ಜಿಬಿ ಯೋಜನೆಯಲ್ಲಿ ಏಕೆ ಆಸಕ್ತಿಯನ್ನು ಕಳೆದುಕೊಳ್ಳುತ್ತಿದೆ ಎನ್ನುವುದರ ಕುರಿತು ಹೆಚ್ಚಿನ ವಿವರಗಳನ್ನು ಒದಗಿಸಿದ್ದರು. ಎಸ್ಜಿಬಿಗಳು ಸರಕಾರಕ್ಕೆ ಹೆಚ್ಚಿನ ವೆಚ್ಚದಾಯಕ ಸಾಲವಾಗಿದೆ ಎನ್ನುವುದು ಇತ್ತೀಚಿನ ಅನುಭವವಾಗಿದೆ. ಹೀಗಾಗಿ ಈ ಮಾರ್ಗವನ್ನು ಅನುಸರಿಸದಿರಲು ಸರಕಾರವು ನಿರ್ಧರಿಸಿದೆ ಎಂದು ಅವರು ತಿಳಿಸಿದ್ದರು.
2024-25ರಲ್ಲಿ ಸರಕಾರವು ಯಾವುದೇ ಎಸ್ಜಿಬಿಗಳನ್ನು ವಿತರಿಸಿಲ್ಲ ಮತ್ತು 2025-26ರಲ್ಲೂ ವಿತರಿಸುವುದಿಲ್ಲ ಎನ್ನುವುದನ್ನು ಬಜೆಟ್ ದಾಖಲೆಗಳು ತೋರಿಸಿವೆ.
ಚಿನ್ನದ ಬಾಂಡ್ಗಳ ಮೇಲಿನ ಸರಕಾರದ ಹೊಣೆಗಾರಿಕೆಗಳು ಅವುಗಳಿಂದ ಸೃಷ್ಟಿಯಾದ ಆದಾಯಕ್ಕಿಂತ ಬಹಳ ವೇಗವಾಗಿ ಬೆಳೆದಿವೆ. ಈ ಹೊಣೆಗಾರಿಕೆ ಕನಿಷ್ಠ 2032ರವರೆಗೂ ಮುಂದುವರಿಯಲಿದೆ. ಹೀಗಾಗಿ ಪ್ರಧಾನಿ ಕಚೇರಿ ಮತ್ತು ವಿತ್ತ ಸಚಿವಾಲಯದಲ್ಲಿ ಈ ಬಾಂಡ್ ಗಳ ವಿನ್ಯಾಸದ ಕುರಿತು ಸ್ವಲ್ಪ ಅಸಮಾಧಾನವಿದೆ ಎಂದು ವಿಷಯವನ್ನು ಬಲ್ಲ ಹಿರಿಯ ಸರಕಾರಿ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.
ಆಮದು ಸುಂಕ ಹೆಚ್ಚಳ ಮತ್ತು ಜಾಗತಿಕ ಅನಿಶ್ಚಿತತೆಯಿಂದಾಗಿ ಚಿನ್ನದ ಬೆಲೆಯು ಸರಕಾರವು ಅಂದಾಜಿಸಿದ್ದಕ್ಕಿಂತ ಹೆಚ್ಚಿನ ವೇಗದಲ್ಲಿ ಏರಿಕೆಯಾಗಿದೆ. ಚಿನ್ನದ ಪ್ರಸ್ತುತ ದರ ಪ್ರತಿ 10 ಗ್ರಾಮ್ಗೆ 84,450 ರೂ.ಗಳಿದ್ದು,ಇದು ಮಾರ್ಚ್ 2017ರಲ್ಲಿದ್ದ ದರಕ್ಕಿಂತ 2.7 ಪಟ್ಟು ಹೆಚ್ಚಾಗಿದೆ.
ಚಿನ್ನದ ದರ ಏರಿಕೆಯ ಹಿನ್ನೆಲೆಯಲ್ಲಿ ಎಸ್ಜಿಬಿ ಯೋಜನೆಯಿಂದಾಗಿ ಸರಕಾರದ ಹೊಣೆಗಾರಿಕೆಗಳು ಕೂಡ ಹೆಚ್ಚಾಗಿವೆ. 2017-18ರಲ್ಲಿ 6,664 ಕೋಟಿ ರೂ.ಗಳಿದ್ದ ಅದರ ಹೊಣೆಗಾರಿಕೆಗಳು 2023-24ರ ವೇಳೆಗೆ 68,598 ಕೋಟಿ ರೂ.ಗಳಿಗೆ ಏರಿಕೆಯಾಗಿದ್ದು, ಇದು ಶೇ.930ರಷ್ಟು ಭಾರೀ ಹೆಚ್ಚಳವಾಗಿದೆ ಎನ್ನುವುದನ್ನು ಬಜೆಟ್ ದಾಖಲೆಗಳು ತೋರಿಸಿವೆ.
ಮಾರುಕಟ್ಟೆ ಅಂದಾಜಿನಂತೆ, ಸರಕಾರವು ಇನ್ನೂ 61 ಕಂತುಗಳ ಚಿನ್ನದ ಬಾಂಡ್ಗಳನ್ನು ಮರುಪಾವತಿಸಬೇಕಿರುವುದರಿಂದ ಪ್ರಸ್ತುತ ಚಿನ್ನದ ದರಗಳನ್ನು ಗಮನಿಸಿದರೆ 2032ರ ವೇಳೆಗೆ ಸರಕಾರದ ಹೊಣೆಗಾರಿಕೆಗಳು 1.12 ಲಕ್ಷ ಕೋಟಿ ರೂ.ಗೆ ಹೆಚ್ಚುವ ನಿರೀಕ್ಷೆಯಿದೆ.
ಸೌಜನ್ಯ : Theprint.in







