ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಪ್ರತಿ 10 ಗ್ರಾಂಗೆ 1.07 ಲಕ್ಷ ರೂ. ಗಡಿ ದಾಟಿದ ಬಂಗಾರ!

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಅಮೆರಿಕ ಕೇಂದ್ರೀಯ ಬ್ಯಾಂಕ್ ಬಡ್ಡಿ ದರಗಳನ್ನು ಇಳಿಕೆ ಮಾಡಬಹುದು ಎಂಬ ಆಶಾವಾದ, ಉಲ್ಬಣಗೊಳ್ಳುತ್ತಿರುವ ಭೌಗೋಳಿಕ ರಾಜಕೀಯ ಪ್ರಕ್ಷುಬ್ಧತೆ ಹಾಗೂ ಅಮೆರಿಕ ಆರ್ಥಿಕತೆ ಕುರಿತ ಅನಿಶ್ಚಿತತೆಯ ಕಾರಣಕ್ಕೆ ಬುಧವಾರ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಪ್ರತಿ 10 ಗ್ರಾಂ ಚಿನ್ನದ ದರ 1,000 ರೂ. ಏರಿಕೆಯಾಗಿದ್ದು, ಪ್ರತಿ 10 ಗ್ರಾಂ ಚಿನ್ನದ ದರ ದಾಖಲೆಯ 1,07,070 ರೂ. ತಲುಪಿದೆ.
ಆಲ್ ಇಂಡಿಯಾ ಸರಾಫಾ ಅಸೋಸಿಯೇಷನ್ ಪ್ರಕಾರ, ಮಂಗಳವಾರ ಶೇ. 99.9 ಪರಿಶುದ್ಧತೆಯ ಚಿನ್ನದ ದರದ ವಹಿವಾಟು ಪ್ರತಿ 10 ಗ್ರಾಂಗೆ 1,06,070 ರೂ.ಗೆ ಅಂತ್ಯಗೊಂಡಿತ್ತು.
ಬುಧವಾರ ದಿಲ್ಲಿ ಚಿನ್ನದ ಮಾರುಕಟ್ಟೆಯಲ್ಲಿ ಸತತ ಎಂಟನೆ ಅವಧಿಗೆ ಗಳಿಕೆ ಮಾಡಿದ ಶೇ. 99.5 ಪರಿಶುದ್ಧತೆಯ ಚಿನ್ನದ ದರ, ಪ್ರತಿ 10 ಗ್ರಾಂಗೆ 1,000 ರೂ.ನಷ್ಟು ಏರಿಕೆಯಾಗುವ ಮೂಲಕ, ಎಲ್ಲ ತೆರಿಗೆಗಳೂ ಸೇರಿದಂತೆ ಪ್ರತಿ 10 ಗ್ರಾಂಗೆ ದಾಖಲೆಯ 1,06,200 ರೂ.ಗೆ ತಲುಪಿತು.
ಮಂಗಳವಾರದ ಮಾರುಕಟ್ಟೆ ವಹಿವಾಟಿನಲ್ಲಿ ಶೇ.99.5 ಪರಿಶುದ್ಧತೆಯ ಚಿನ್ನದ ಪ್ರತಿ 10 ಗ್ರಾಂ ದರ 1,05,2000 ರೂ.ನಲ್ಲಿ ಅಂತ್ಯಗೊಂಡಿತ್ತು.
ಈ ನಡುವೆ, ಬುಧವಾರ ಬೆಳ್ಳಿಯು ಎಲ್ಲ ತೆರಿಗೆಗಳೂ ಸೇರಿದಂತೆ ಪ್ರತಿ ಕೆಜಿಗೆ 1,26,100 ರೂ.ನಂತೆ ಮಾರಾಟವಾಗಿದೆ. ಆಲ್ ಇಂಡಿಯಾ ಸರಾಫಾ ಅಸೋಸಿಯೇಷನ್ ಪ್ರಕಾರ, ಇದು ಬೆಳ್ಳಿ ದರದ ಸಾರ್ವಕಾಲಿಕ ಮಟ್ಟವಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಥಳದಲ್ಲೇ ಖರೀದಿಸಲಾಗುವ ಭೌತಿಕ ಚಿನ್ನದ ದರ ಕೂಡಾ ಸಾರ್ವಕಾಲಿಕ ಏರಿಕೆ ಕಂಡು, ಪ್ರತಿ ಔನ್ಸ್ ಗೆ 3,547.09 ಅಮೆರಿಕನ್ ಡಾಲರ್ ಗೆ ತಲುಪಿತು.







