ಚಿನ್ನದ ದರದಲ್ಲಿ ಮತ್ತೆ ಏರಿಕೆ; ಬೆಳ್ಳಿದರದಲ್ಲಿ 2 ಸಾವಿರ ರೂ. ಇಳಿಕೆ

ಸಾಂದರ್ಭಿಕ ಚಿತ್ರ | Photo Credit : freepik.com
ಹೊಸದಿಲ್ಲಿ, ಅ.31: ಚಿನ್ನದ ಧಾರಣೆಯಲ್ಲಿ ಶುಕ್ರವಾರ ತೀವ್ರ ಏರಿಕೆಯಾಗಿದ್ದು, 10 ಗ್ರಾಂ ಹಳದಿ ಲೋಹದ ದರವು ಗರಿಷ್ಠ 1,25,600 ರೂ.ಗೆ ತಲುಪಿದೆ. ದಿಲ್ಲಿಯ ಚಿನಿವಾರಪೇಟೆಯಲ್ಲಿ ಶುಕ್ರವಾರ ಶೇ.99.5ರಷ್ಟು ಪರಿಶುದ್ಧತೆಯ ಆಭರಣ ಚಿನ್ನದ ದರ 10 ಗ್ರಾಂಗೆ 1,25,600 ರೂ. ಆಗಿದ್ದು, 2,200 ರೂ. ಏರಿಕೆಯಾಗಿದೆ. ಗುರುವಾರ ಆಭರಣ ಚಿನ್ನದ ದರ 1,23,800 ರೂ. ಆಗಿತ್ತು.
ಚಿನ್ನ ದಾಸ್ತಾನುದಾರರು ಹಾಗೂ ಆಭರಣ ತಯಾರಕರಿಂದ ಚಿನ್ನ ಖರೀದಿಯಲ್ಲಿ ಹೆಚ್ಚಳವಾಗಿರುವುದೇ, ದರ ಏರಿಕೆಗೆ ಕಾರಣವೆಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.
ಇತ್ತ ಬೆಳ್ಳಿ ದರದಲ್ಲಿ 2 ಸಾವಿರ ರೂ. ಇಳಿಕೆಯಾಗಿದ್ದು. 1 ಕೆ.ಜಿ. ಬೆಳ್ಳಿ ಬೆಲೆ 1,53,000 ರೂ. ಆಗಿದೆ. ಗುರುವಾರ 1 ಕೆ.ಜಿ. ಬೆಳ್ಳಿದರ 1.55 ಲಕ್ಷ ರೂ. ಆಗಿತ್ತು.
ಮುಂಬೈ ಹಾಗೂ ಮಂಗಳೂರು ಮತ್ತಿತರ ಕೆಲವು ನಗರಗಳಲ್ಲಿ 24 ಕ್ಯಾರಟ್ ಚಿನ್ನದ ದರವು ಶುಕ್ರವಾರ ಪ್ರತಿ 10 ಗ್ರಾಂಗೆ 1,22,680 ರೂ.1,23,280 ರೂ. ಆಗಿತ್ತೆಂದು ವರದಿಗಳು ತಿಳಿಸಿವೆ.





