ಮತ್ತೆ ಏರಿದ ಚಿನ್ನದ ದರ; ಹೂಡಿಕೆದಾರರಿಗೆ ಸ್ವರ್ಗವಾದ ಹಳದಿ ಲೋಹ!

ಹೊಸದಿಲ್ಲಿ: ದಿಲ್ಲಿಯ ಚಿನಿವಾರ ಪೇಟೆಯಲ್ಲಿ ಮಂಗಳವಾರ ಚಿನ್ನದ ಬೆಲೆಯಲ್ಲಿ ಮತ್ತೊಮ್ಮೆ ಏರಿಕೆ ಕಂಡು ಬಂದಿದ್ದು, 24 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ 125 ರೂ.ನಷ್ಟು ಏರಿಕೆ ಕಂಡು, 12,202 ರೂ.ಗೆ ತಲುಪಿತು. ಇದೇ ರೀತಿ 22 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ 115 ರೂ.ನಷ್ಟು ಏರಿಕೆ ಕಂಡು, 11,185 ರೂ. ತಲುಪಿದರೆ, 18 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ 94 ರೂ.ನಷ್ಟು ಏರಿಕೆ ಕಂಡು, 9,152 ರೂ.ಗೆ ತಲುಪಿದೆ.
ಅಮೆರಿಕ ಸರಕಾರ ಸ್ಥಗಿತಗೊಳ್ಳುವ ಗಂಭೀರ ಅಪಾಯ ಹಾಗೂ ಭಾರತದಲ್ಲಿನ ಹಬ್ಬದ ಋತುವಿನ ಬೇಡಿಕೆ ಹಿನ್ನೆಲೆಯಲ್ಲಿ ಹೂಡಿಕೆದಾರರ ಸ್ವರ್ಗ ಎಂದೇ ಪರಿಗಣಿಸಲಾಗಿರುವ ಚಿನ್ನಕ್ಕಾಗಿನ ಬೇಡಿಕೆಯಲ್ಲಿ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಬಗೆಯ ಪರಿಶುದ್ಧತೆಯ ಚಿನ್ನದ ದರದಲ್ಲಿ ಗಮನಾರ್ಹ ಏರಿಕೆ ಕಂಡು ಬಂದಿತು.
ದೇಶದ ಇನ್ನಿತರ ಪ್ರಮುಖ ಚಿನಿವಾರ ಪೇಟೆಗಳಾದ ಮುಂಬೈ, ಚೆನ್ನೈ, ಹೈದರಾಬಾದ್, ಕೋಲ್ಕತ್ತಾ, ಬೆಂಗಳೂರಿನಲ್ಲೂ ಚಿನ್ನದ ಬೆಲೆಯಲ್ಲಿ ದಾಖಲೆಯ ಜಿಗಿತವಾಗಿದೆ. ಆ ಮೂಲಕ ಭಾರತದಲ್ಲಿನ ಐತಿಹಾಸಿಕ ಚಿನ್ನದ ದರ ಏರಿಕೆಯ ನಾಗಾಲೋಟ ಮುಂದುವರಿದಿದೆ.





