ಗೋಲ್ಡನ್ ಟೆಂಪಲ್ ಗೆ ಏರ್ ಡಿಫೆನ್ಸ್ ಸಿಸ್ಟಮ್ ನಿಯೋಜಿಸಿರಲಿಲ್ಲ: ಭಾರತೀಯ ಸೇನೆ ಸ್ಪಷ್ಟನೆ

PC : hindustantimes.com \ Sameer Sehgal
ಅಮೃತಸರ: ‘ಆಪರೇಷನ್ ಸಿಂಧೂರ’ದ ವೇಳೆ ಗೋಲ್ಡನ್ ಟೆಂಪಲ್ ಆವರಣದಲ್ಲಿ ಏರ್ ಡಿಫೆನ್ಸ್ ಸಿಸ್ಟಮ್ ನ ಯಾವುದೇ ಸೌಲಭ್ಯಗಳನ್ನು ನಿಯೋಜಿಸಿರಲಿಲ್ಲ’ ಎಂದು ಭಾರತೀಯ ಸೇನೆ ಮಂಗಳವಾರ ಸ್ಪಷ್ಟನೆ ನೀಡಿದೆ.
ಪಾಕಿಸ್ತಾನದ ಡ್ರೋನ್ ಗಳು ಮತ್ತು ಕ್ಷಿಪಣಿಗಳ ಸಂಭವನೀಯ ದಾಳಿ ಎದುರಿಸಲು ಗೋಲ್ಡನ್ ಟೆಂಪಲ್ ನ ಆಡಳಿತವು ಆವರಣದೊಳಗೆ ಏರ್ ಡಿಫೆನ್ಸ್ ಸಿಸ್ಟಮ್ ನಿಯೋಜಿಸಲು ಸೇನೆಗೆ ಅವಕಾಶ ನೀಡಿದೆ ಎಂಬ ಮಾಧ್ಯಮ ವರದಿಗಳ ನಂತರ ಸೇನೆಯು ಈ ಸ್ಪಷ್ಟನೆ ನೀಡಿದೆ.
‘ಗೋಲ್ಡನ್ ಟೆಂಪಲ್ ನಲ್ಲಿ ಏರ್ ಡಿಫೆನ್ಸ್ ಸಿಸ್ಟಮ್ ಅಳವಡಿಸಲಾಗಿತ್ತು ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಅಮೃತಸರದ ಗೋಲ್ಡನ್ ಟೆಂಪಲ್ ಆವರಣದಲ್ಲಿ ಯಾವುದೇ ರಕ್ಷಣಾ ವ್ಯವಸ್ಥೆಯ ಶಸ್ತ್ರಾಸ್ತ್ರಗಳನ್ನು ನಿಯೋಜಿಸಿಲ್ಲ’ ಎಂದು ಸೇನೆಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಗೋಲ್ಡನ್ ಟೆಂಪಲ್ ನಲ್ಲಿ ಏರ್ ಡಿಫೆನ್ಸ್ ಸಿಸ್ಟಮ್ ನಿಯೋಜಿಸಲು ಭಾರತೀಯ ಸೇನೆಗೆ ಯಾವುದೇ ಅನುಮತಿ ನೀಡಿಲ್ಲ ಎಂದು ಮಂದಿರದ ಹೆಚ್ಚುವರಿ ಪ್ರಧಾನ ಅರ್ಚಕ ಗ್ಯಾನಿ ಅಮರ್ಜೀತ್ ಸಿಂಗ್ ಮತ್ತು ಸಿಖ್ಖರ ಪ್ರಮುಖ ಧಾರ್ಮಿಕ ಸಂಸ್ಥೆಯಾದ ಶಿರೋಮಣಿ ಗುರುದ್ವಾರ ಪ್ರಬಂಧಕ ಕಮಿಟಿ (ಎಸ್ಜಿಪಿಸಿ) ಅಧ್ಯಕ್ಷ ಹರ್ಜಿಂದರ್ ಸಿಂಗ್ ಧಾಮಿ ಕೂಡ ಸ್ಪಷ್ಟನೆ ನೀಡಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಉಲ್ಬಣಗೊಂಡ ನಂತರ ‘ಬ್ಲಾಕ್ಔಟ್’ ಸಮಯದಲ್ಲಿ ವಿದ್ಯುತ್ ದೀಪಗಳನ್ನು ಆರಿಸಲು ಮಾತ್ರ ಜಿಲ್ಲಾಡಳಿತ ಸಂಪರ್ಕಿಸಿತ್ತು. ಆಡಳಿತಾತ್ಮಕ ಜವಾಬ್ದಾರಿಯ ಹಿತದೃಷ್ಟಿಯಿಂದ, ಮಂದಿರದ ಶಿಷ್ಟಾಚಾರ ಮತ್ತು ಪಾವಿತ್ರ್ಯತೆಗೆ ಅನುಗುಣವಾಗಿ ಸಂಪೂರ್ಣವಾಗಿ ಸಹಕರಿಸಲಾಗಿದೆ. ಗೋಲ್ಡನ್ ಟೆಂಪಲ್ ನಲ್ಲಿ ಏರ್ ಡಿಫೆನ್ಸ್ ಸಿಸ್ಟಮ್ ನಿಯೋಜಿಸಲು ಸೇನೆಯ ಯಾವುದೇ ಅಧಿಕಾರಿಯು ಸಂಪರ್ಕ ಮಾಡಿಲ್ಲ. ಬ್ಲ್ಯಾಕೌಟ್ ಸಮಯದಲ್ಲಿಯೂ ಹೆಚ್ಚಿನ ಸಂಖ್ಯೆಯ ಭಕ್ತರು ಸ್ವಯಂಪ್ರೇರಿತ ಸೇವೆಗೆ ಮಂದಿರಕ್ಕೆ ಭೇಟಿ ನೀಡಿದ್ದರು ಎಂದು ಧಾಮಿ ಹೇಳಿದರು.
ಉದ್ವಿಗ್ನತೆಯ ಸಂದರ್ಭ ಸೇನೆ ಮತ್ತು ದೇಶವು ವಹಿಸಿದ ಪಾತ್ರ ಶ್ಲಾಘನೀಯವಾದುದು. ಆದರೆ, ಸಿಖ್ಖರ ಪ್ರಮುಖ ಧಾರ್ಮಿಕ ಸ್ಥಳದ ಬಗ್ಗೆ ಇಂತಹ ಸುಳ್ಳನ್ನು ಹರಡುವುದು ಆಘಾತಕಾರಿಯಾದುದು. ಸರ್ಕಾರ ಕೂಡ ಸ್ಪಷ್ಟನೆ ನೀಡಬೇಕು ಎಂದು ಅವರು ಒತ್ತಾಯಿಸಿದರು.







