ಗೋಲ್ಡಿ ಬ್ರಾರ್ ಗ್ಯಾಂಗ್ ಸದಸ್ಯರಿಂದ ಮುನವ್ವರ್ ಫಾರೂಕಿ ಹತ್ಯೆ ನಡೆಸಲು ಸಂಚು : ತನಿಖೆ ವೇಳೆ ಬಯಲು

ಮುನವ್ವರ್ ಫಾರೂಕಿ | PC : @munawar.faruqui \ instagram.com
ಹೊಸ ದಿಲ್ಲಿ: ಕಾಮಿಡಿಯನ್ ಮುನಾವ್ವರ್ ಫಾರೂಕಿಯನ್ನು ಹತ್ಯೆಗೈಯ್ಯಲು ಯೋಜಿಸಿದ್ದ ಗೋಲ್ಡಿ ಬ್ರಾರ್ ಗುಂಪಿನ ಇಬ್ಬರು ಸದಸ್ಯರನ್ನು ಗುರುವಾರ ಬೆಳಿಗ್ಗೆ ದಿಲ್ಲಿಯಲ್ಲಿನ ಜೈತ್ಪುರ-ಕಲಿಂದಿ ರಸ್ತೆಯಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಬಂಧಿತ ಆರೋಪಿಗಳನ್ನು ಹರ್ಯಾಣದ ಪಾಣಿಪತ್ನ ರಾಹುಲ್ ಹಾಗೂ ಭಿವಾನಿಯ ಸಾಹಿಲ್ ಎಂದು ಗುರುತಿಸಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಗೋಲ್ಡಿ ಬ್ರಾರ್ ಹಾಗೂ ವಿರೇಂದ್ರ ಚರಣ್ ಸಂಪರ್ಕದಲ್ಲಿರುವ ವಿದೇಶದಲ್ಲಿ ನೆಲೆಸಿರುವ ಗ್ಯಾಂಗ್ ಸ್ಟರ್ ರೋಹಿತ್ ಗೊದಾರ ನಿರ್ದೇಶನದನ್ವಯ ಈ ಇಬ್ಬರೂ ಆರೋಪಿಗಳು ಈ ಕೃತ್ಯಕ್ಕೆ ಮುಂದಾಗಿದ್ದರು ಎನ್ನಲಾಗಿದೆ.
ಬಂಧನಕ್ಕೆ ಮೊದಲು ಆರೋಪಿಗಳು ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಆರೋಪಿ ರೋಹಿತ್ಗೆ ಗಾಯವಾಗಿದ್ದು, ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಸೆಂಬರ್ 2024ರಲ್ಲಿ ಹರ್ಯಾಣದ ಯಮುನಾನಗರದಲ್ಲಿ ನಡೆದಿದ್ದ ತ್ರಿವಳಿ ಹತ್ಯೆ ಪ್ರಕರಣದಲ್ಲೂ ರಾಹುಲ್ ಪೊಲೀಸರಿಗೆ ಬೇಕಾಗಿದ್ದ ಎಂದು ಹೇಳಲಾಗಿದೆ.
ಪೊಲೀಸರು ಹಾಗೂ ಆರೋಪಿಗಳ ನಡುವೆ ಗುಂಡಿನ ಚಕಮಕಿ ನಡೆದ ಬಳಿಕ ಅವರಿಂದ ಶಸ್ತ್ರಾಸ್ತ್ರಗಳು ಹಾಗೂ ಒಂದು ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.







