ವಿದೇಶಾಂಗ ಕಾರ್ಯದರ್ಶಿಯನ್ನು ಟ್ರೋಲ್ ಮಾಡಿದವರ ಬಗ್ಗೆ ಸರ್ಕಾರಕ್ಕೆ ಯಾವುದೇ ಮಾಹಿತಿ ಇಲ್ಲ: ಆರ್ಟಿಐನಿಂದ ಬಹಿರಂಗ

PC | PTI
ಹೊಸದಿಲ್ಲಿ: ಕಳೆದ ತಿಂಗಳು ಪಾಕಿಸ್ತಾನದೊಂದಿಗೆ ಮಿಲಿಟರಿ ಸಂಘರ್ಷ ಆಪರೇಷನ್ ಸಿಂಧೂರ್ ಸಂದರ್ಭದಲ್ಲಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಮತ್ತು ಅವರ ಮಗಳ ಮೇಲೆ ಕೆಟ್ಟದಾಗಿ ಟ್ರೋಲ್ ದಾಳಿ ನಡೆಸಿದ ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಯಾವುದೇ ಮಾಹಿತಿ ಇಲ್ಲ ಎಂದು ಆರ್ ಟಿ ಐ ಅರ್ಜಿಯಲ್ಲಿ ಬಹಿರಂಗವಾಗಿದೆ.
ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆಯ ಬಳಿಕ ಮಿಸ್ರಿ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ನಿಂದನಾತ್ಮಕವಾಗಿ ಟ್ರೋಲ್ ಮಾಡಲಾಗಿತ್ತು. ನಂತರ ಮೇ 11 ರಂದು ಮಿಸ್ರಿ ತಮ್ಮ ಎಕ್ಸ್ ಖಾತೆಯನ್ನು ಲಾಕ್ ಮಾಡಿದ್ದರು ಎಂದು The wire ವರದಿ ಮಾಡಿತ್ತು.
ವಿಶೇಷವೆಂದರೆ ಆಪರೇಷನ್ ಸಿಂಧೂರ್ ಬಗ್ಗೆ ಮಾಧ್ಯಮಗಳಿಗೆ ಸಂಕ್ಷಿಪ್ತವಾಗಿ ದಿನಂಪ್ರತಿ ಮಾಹಿತಿ ಹಂಚಿಕೊಳ್ಳುತ್ತಿದ್ದ ವಿಕ್ರಂ ಮಿಸ್ರಿಯವರನ್ನು ವೈಯಕ್ತಿಕವಾಗಿ ಟ್ರೋಲ್ ಮಾಡಿದ್ದನ್ನು ವಿದೇಶಾಂಗ ಸಚಿವ ಎಸ್. ಜೈಶಂಕರ್ ಸೇರಿದಂತೆ ಕೇಂದ್ರ ಸರ್ಕಾರದಿಂದ ಯಾರೂ ಖಂಡಿಸಿಲ್ಲ ಅಥವಾ ಅವರ ಬೆಂಬಲಕ್ಕೆ ಬಂದಿಲ್ಲ ಎಂದು ತಿಳಿದುಬಂದಿದೆ.
ಕದನ ವಿರಾಮ ಘೋಷಣೆಯ ಬಳಿಕ ಬಲಪಂಥೀಯ X ಖಾತೆಗಳು ಮಿಸ್ರಿ ಅವರನ್ನು "ದೇಶದ್ರೋಹಿ" ಎಂದು ಕರೆದು, ಕದನ ವಿರಾಮಕ್ಕೆ ಅವರನ್ನೇ ದೂಷಿಸಿದವು. ತಮ್ಮ ಕುಟುಂಬಗಳ ಬಗ್ಗೆ ಅವರು ಕುಟುಂಬದ ಬಗ್ಗೆ ಹಂಚಿಕೊಂಡಿದ್ದ ಹಳೆಯ ಪೋಸ್ಟ್ಗಳನ್ನು ಹೆಕ್ಕಿ ತೆಗೆದು ವೈಯಕ್ತಿಕ ದಾಳಿ ನಡೆಸಿದವು. ವಿದೇಶದಲ್ಲಿ ಅಧ್ಯಯನ ಮಾಡುತ್ತಿದ್ದ ಮತ್ತು 'ಮ್ಯಾನ್ಮಾರ್ನ ರೋಹಿಂಗ್ಯಾ ನಿರಾಶ್ರಿತರಿಗೆ ಕಾನೂನು ನೆರವು ನೀಡುತ್ತಿರುವ' ಅವರ ಮಗಳನ್ನು ಗುರಿಯಾಗಿಸಿಕೊಂಡ ನಿರಂತರ ಟ್ರೋಲ್ ಗಳು ನಡೆದವು. ಆ ಬಳಿಕ ಮಿಸ್ರಿ ಖಾತೆಯನ್ನು ಲಾಕ್ ಮಾಡಲಾಯಿತು.
ಕಾಮನ್ವೆಲ್ತ್ ಹ್ಯೂಮನ್ ರೈಟ್ಸ್ ಇನಿಶಿಯೇಟಿವ್ ನ ನಿರ್ದೇಶಕ ವೆಂಕಟೇಶ್ ನಾಯಕ್, ಮಿಸ್ರಿ ಮತ್ತು ಅವರ ಕುಟುಂಬದ ಬಗ್ಗೆ ಟ್ರೋಲಿಂಗ್ ಮತ್ತು ಆನ್ಲೈನ್ ನಿಂದನೆ ಮಾಡಿದವರ ಬಗ್ಗೆ ಮಾಹಿತಿ ಕೋರಿ ಆರ್ಟಿಇ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಿದೇಶಾಂಗ ಸಚಿವಾಲಯ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಪ್ರತ್ಯೇಕ ಆರ್ಟಿಐ ಅರ್ಜಿ ಸಲ್ಲಿಸಿದರು.
ಅರ್ಜಿಗೆ ಉತ್ತರಿಸಿದ ಎರಡು ಸಚಿವಾಲಯಗಳು ಅಂತಹ ಮಾಹಿತಿ ಲಭ್ಯವಿಲ್ಲ ಎಂದು ಚುಟುಕಾಗಿ ಉತ್ತರಿಸಿದವು. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಈ ವಿಷಯದ ಬಗ್ಗೆ ಯಾವುದೇ ಮಾಹಿತಿಯನ್ನು ಹೊಂದಿಲ್ಲ ಎಂದು ಹೇಳಿದ್ದರೂ, ನಾಯಕ್ ಇನ್ನೂ ಮೇಲ್ಮನವಿ ಸಲ್ಲಿಸಿಲ್ಲ.
ಸೌಜನ್ಯ: thewire.in







