ಸರಕಾರದ ನೀತಿ ವಿರುದ್ಧ ಪೋಸ್ಟ್ ಹಾಕಿದರೆ ಕ್ರಮ : ಜಮ್ಮು-ಕಾಶ್ಮೀರದ ಬೋಧಕ, ಬೋಧಕೇತರ ಸಿಬ್ಬಂದಿಗೆ ಎಚ್ಚರಿಕೆಯ ಸುತ್ತೋಲೆ

ಸಾಂದರ್ಭಿಕ ಚಿತ್ರ
ಶ್ರೀನಗರ, ಅ. 5: ಜಮ್ಮು ಹಾಗೂ ಕಾಶ್ಮೀರದ ಬಾರಾಮುಲ್ಲಾದ ಮುಖ್ಯ ಶಿಕ್ಷಣ ಅಧಿಕಾರಿ (ಸಿಇಒ) ಸರಕಾರದ ನೀತಿಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಟೀಕಿಸದಂತೆ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ನಿರ್ದೇಶಿಸಿದ್ದಾರೆ.
ಈ ಸೂಚನೆಯನ್ನು ಅನುಸರಿಸದೇ ಇದ್ದರೆ, ಸೇವೆಯಿಂದ ಅಮಾನತು ಸೇರಿದಂತೆ ದಂಡನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ. ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಶುಕ್ರವಾರ ನಡೆದ ಸಭೆಯಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸಾಮಾಜಿಕ ಮಾದ್ಯಮದ ವೇದಿಕೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ವಿವಿಧ ನಿದರ್ಶನಗಳ ಕುರಿತು ಚರ್ಚೆ ನಡೆಸಲಾಯಿತು ಎಂದು ಅಧಿಕಾರಿಗಳ ತಿಳಿಸಿದ್ದಾರೆ.
ಶಿಕ್ಷಣ ಇಲಾಖೆಯ ಆಡಳಿತ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಅಂತಹ ಯಾವುದೇ ಉಲ್ಲಂಘನೆಯನ್ನು ಆಡಳಿತಕ್ಕೆ ತಪ್ಪದೇ ವರದಿ ಮಾಡುವಂತೆ ಎಲ್ಲಾ ಮುಖ್ಯ ಶಿಕ್ಷಣ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು ಎಂದು ಮೂಲಗಳು ತಿಳಿಸಿವೆ.
ಅಕ್ಟೋಬರ್ 4ರಂದು ಹೊರಡಿಸಲಾದ ಸುತ್ತೋಲೆಯಲ್ಲಿ ಬಾರಾಮುಲ್ಲಾದ ಸಿಇಒ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಎಲ್ಲಾ ಉದ್ಯೋಗಿಗಳು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶಿಸಿದ್ದಾರೆ. ಅನಗತ್ಯ ಚರ್ಚೆಗಳಲ್ಲಿ ಭಾಗವಹಿಸದಂತೆ, ಸಾಮಾಜಿಕ ವೇದಿಕೆಗಳಲ್ಲಿ ಅನುಚಿತ ವಿಷಯ ಹಂಚಿಕೊಳ್ಳದಂತೆ, ಟೀಕೆ ಮಾಡದಂತೆ ಹಾಗೂ ಪೋಸ್ಟ್ ಹಾಕದಂತೆ ಅವರು ಸೂಚಿಸಿದ್ದಾರೆ. ಅಂತಹ ಕೃತ್ಯಗಳು ಇಲಾಖೆಯ ನೀತಿ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುತ್ತದೆ ಎಂದು ಅವರು ಹೇಳಿದಾರೆ.







