ಸಾಮಾಜಿಕ ಭದ್ರತೆಗಾಗಿ ಗಿಗ್ ಕಾರ್ಮಿಕರಿಗೆ 90 ದಿನಗಳ ಉದ್ಯೋಗ ಕಡ್ಡಾಯ: ಸರ್ಕಾರ ಪ್ರಸ್ತಾವನೆ

PC: x.com/IndianTechGuide
ಹೊಸದಿಲ್ಲಿ: ಹೊಸ ಸಾಮಾಜಿಕ ಭದ್ರತಾ ಸಂಹಿತೆಯಡಿ ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಪಡೆಯಲು ಗಿಗ್ ಹಾಗೂ ಪ್ಲಾಟ್ಫಾರಂ ಕಾರ್ಮಿಕರು ಒಂದು ಹಣಕಾಸು ವರ್ಷದಲ್ಲಿ ಒಬ್ಬ ಗುತ್ತಿಗೆದಾರನ ಜತೆ ಕನಿಷ್ಠ 90 ದಿನ ಕೆಲಸ ಮಾಡುವುದನ್ನು ಕಡ್ಡಾಯಪಡಿಸುವ ಕರಡು ನಿಯಮಾವಳಿಯನ್ನು ಸಾರ್ವಜನಿಕ ಅಭಿಪ್ರಾಯ ಸಂಗ್ರಹಕ್ಕಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಹಲವು ಗುತ್ತಿಗೆದಾರರಡಿ ಕೆಲಸ ಮಾಡುವವರು ಕನಿಷ್ಠ 120 ದಿನಗಳ ಕಾಲ ಕೆಲಸ ಮಾಡಬೇಕಾಗುತ್ತದೆ.
ಈ ನಿಯಮಾವಳಿಯಡಿ ಕಾರ್ಮಿಕರು ಕೆಲಸದಲ್ಲಿ ತೊಡಗಿಸಿಕೊಂಡು ಎಷ್ಟೇ ಪ್ರಮಾಣದ ಆದಾಯ ಗಳಿಸಿದರೂ, ಆದಾಯ ಗಳಿಸಲು ಆರಂಭಿಸಿದ ದಿನದಿಂದಲೇ ಅವರನ್ನು ಕಾರ್ಮಿಕರೆಂದು ಪರಿಗಣಿಸಲಾಗುತ್ತದೆ. ಬೇರೆ ಬೇಗೆ ಗುತ್ತಿಗೆದಾರರ ಅಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರ ಕೆಲಸದ ದಿನಗಳನ್ನು ಎಲ್ಲ ಪ್ಲಾಟ್ಫಾರಂಗಳಡಿಯೂ ಕ್ರೋಢೀಕೃತವಾಗಿ ಲೆಕ್ಕ ಹಾಕಲಾಗುತ್ತದೆ. ಉದಾಹರಣೆಗೆ ಒಬ್ಬ ಗಿಗ್ ಅಥವಾ ಪ್ಲಾಟ್ಫಾರಂ ಕಾರ್ಮಿಕ ಮೂವರು ಗುತ್ತಿಗೆದಾರರಡಿ ಒಂದೇ ದಿನ ಕಾರ್ಯ ನಿರ್ವಹಿಸಿದಲ್ಲಿ ಇದನ್ನು ಮೂರು ಕೆಲಸದ ದಿನ ಎಂದು ಪರಿಗಣಿಸಲಾಗುತ್ತದೆ.
ಅರ್ಹ ಗಿಗ್ ಅಥವಾ ಪ್ಲಾಟ್ಫಾರಂ ಕಾರ್ಮಿಕರನ್ನು ಗುತ್ತಿಗೆದಾರರು ನೇರವಾಗಿ ನೇಮಿಸಿಕೊಂಡರೆ ಅಥವಾ ಸಹ ಕಂಪನಿ, ಉಪಕಂಪನಿ ಅಥವಾ ಎಲ್ಎಲ್ಪಿ ಇಲ್ಲವೇ ಇತರರ ಮೂಲಕ ನೇಮಕ ಮಾಡಿಕೊಂಡರು ಕೂಡಾ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ ಎಂದು ನಿಯಮಾವಳಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ಹೊಸ ಕಾರ್ಮಿಕ ಸಂಹಿತೆಯಡಿ ಗಿಗ್ ಕಾರ್ಮಿಕರಿಗೆ ಆರೋಗ್ಯ, ಜೀವವಿಮೆ ಹಾಗೂ ವೈಯಕ್ತಿಕ ಅಪಘಾತ ವಿಮೆ ಕಡ್ಡಾಯ ಹಾಗೂ ಸರ್ಕಾರ ವ್ಯವಸ್ಥೆ ಮಾಡುವ ಇತರ ಸಾಮಾಜಿಕ ಭದ್ರತಾ ಕ್ರಮಗಳು ಕಡ್ಡಾಯ. ಕಾರ್ಮಿಕ ಸಚಿವಾಲಯ ಈಗಾಗಲೇ ಗಿಗ್ ಕಾರ್ಮಿಕರನ್ನು ಆಯುಷ್ಮಾನ್ ಭಾರತದ ಭಾಗವಾಗಿ ಇ-ಶ್ರಮ್ ಪೋರ್ಟೆಲ್ ನಲ್ಲಿ ನೋಂದಣಿ ಮಾಡಿಕೊಳ್ಳಲು ಆರಂಭಿಸಿದೆ.







