ಮೂಲಭೂತ ಕೌಶಲ್ಯಗಳ ಚೇತರಿಕೆಯಲ್ಲಿ ಖಾಸಗಿಗಿಂತ ಸರಕಾರಿ ಶಾಲೆಗಳ ಮಕ್ಕಳು ಮುಂದು; ವರದಿ

ಸಾಂದರ್ಭಿಕ ಚಿತ್ರ (Photo: PTI)
ಹೊಸದಿಲ್ಲಿ: ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಶಾಲೆಗಳನ್ನು ಮುಚ್ಚಿದ್ದು ಮೂರಂಕಿಗಳ ಸಂಖ್ಯೆಯನ್ನು ಭಾಗಿಸುವ ಮತ್ತು ತಮ್ಮ ಪ್ರಾದೇಶಿಕ ಭಾಷೆಯಲ್ಲಿ ಪ್ಯಾರಾವೊಂದನ್ನು ಓದುವ ಗ್ರಾಮೀಣ ಶಾಲಾಮಕ್ಕಳ ಸಾಮರ್ಥ್ಯದ ಮೇಲೆ ಗಮನಾರ್ಹ ಪರಿಣಾಮವನ್ನು ಬೀರಿತ್ತು.
ವಾರ್ಷಿಕ ಶಿಕ್ಷಣದ ಸ್ಥಿತಿಗತಿ ವರದಿ(ಗ್ರಾಮೀಣ)ಯಲ್ಲಿ ಪ್ರಕಟಗೊಂಡಿರುವ 2024ನೇ ಸಾಲಿನ ಇತ್ತೀಚಿನ ದತ್ತಾಂಶಗಳು ಗ್ರಾಮೀಣ ಮಕ್ಕಳಲ್ಲಿ ಸಾಂಕ್ರಾಮಿಕದ ಸಂದರ್ಭದಲ್ಲಿ ಕಲಿಕೆಯ ನಷ್ಟದಿಂದ ಹೆಚ್ಚಿನ ಚೇತರಿಕೆ ಕಂಡು ಬಂದಿದೆ, ಆದಾಗ್ಯೂ ಈ ದತ್ತಾಂಶಗಳನ್ನು ವಿವರವಾಗಿ ವಿಶ್ಲೇಷಿಸಿದಾಗ ಚೇತರಿಕೆಯು ಸಮಾನ ಮಟ್ಟದಲ್ಲಿಲ್ಲ ಎನ್ನುವುದು ಕಂಡುಬರುತ್ತದೆ.
ಸಾಂಕ್ರಾಮಿಕದ ಸಮಯದಲ್ಲಿನ ಕಲಿಕೆಯ ನಷ್ಟ ಮತ್ತು ಸಾಂಕ್ರಾಮಿಕದ ನಂತರದ ಚೇತರಿಕೆಯನ್ನು ಅರ್ಥ ಮಾಡಿಕೊಳ್ಳಲು ವರದಿಯಲ್ಲಿನ ಐದನೇ ತರಗತಿಯ ಮಕ್ಕಳ ಡೇಟಾ ಬಳಸಿಕೊಳ್ಳಲಾಗಿದ್ದು, ಮೊದಲನೆಯದಾಗಿ ಮಕ್ಕಳು ತಮ್ಮ ಅಂಕಗಣಿತ ಸಾಮರ್ಥ್ಯದಲ್ಲಿ ಗಮನಾರ್ಹ ಸುಧಾರಣೆಯನ್ನು ತೋರಿಸಿದ್ದಾರಾದರೂ ಓದುವ ಸಾಮರ್ಥ್ಯದಲ್ಲಿ ಅವರ ಪ್ರಗತಿಯು ಕಡಿಮೆಯಾಗಿದೆ.
ಎರಡನೆಯದಾಗಿ ಸರಕಾರಿ ಶಾಲಾಮಕ್ಕಳು ತಮ್ಮ ಓದುವ ಸಾಮರ್ಥ್ಯದಲ್ಲಿ ಬಲವಾದ ಚೇತರಿಕೆಯನ್ನು ತೋರಿಸಿದ್ದು,ತಮ್ಮ ಪ್ರಾದೇಶಿಕ ಭಾಷೆಯಲ್ಲಿ ಪ್ಯಾರಾವೊಂದನ್ನು ಓದಬಲ್ಲವರ ಪಾಲು ಸಾಂಕ್ರಾಮಿಕದ ಪೂರ್ವದ ಮಟ್ಟವನ್ನು ತಲುಪಿದೆ. ಖಾಸಗಿ ಶಾಲಾಮಕ್ಕಳು ಸಾಂಕ್ರಾಮಿಕದಿಂದಾಗಿ ಕಲಿಕೆಯ ನಷ್ಟದಿಂದ ಸ್ವಲ್ಪ ಮಟ್ಟಿಗೆ ಸುಧಾರಿಸಿಕೊಂಡಿದ್ದರೂ ತಮ್ಮ ಪ್ರಾದೇಶಿಕ ಭಾಷೆಯಲ್ಲಿ ಪ್ಯಾರಾವೊಂದನ್ನು ಓದುವವರ ಪಾಲು ಸಾಂಕ್ರಾಮಿಕದ ಪೂರ್ವದ ಮಟ್ಟಕ್ಕಿಂತ ಕಡಿಮೆಯಾಗಿದೆ.
ಮೂರನೆಯದಾಗಿ,ಸರಕಾರಿ ಮತ್ತು ಖಾಸಗಿ ಶಾಲಾಮಕ್ಕಳು ಪ್ರಾಥಮಿಕ ಅಂಕಗಣಿತದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಂಕ್ರಾಮಿಕದ ಮೊದಲಿನ ಮಟ್ಟಕ್ಕಿಂತ ಹೆಚ್ಚು ಉತ್ತಮಗೊಳಿಸಿಕೊಂಡಿದ್ದಾರೆ. ಆದರೆ ಈ ಚೇತರಿಕೆ ಖಾಸಗಿ ಶಾಲೆಗಳಿಗೆ ಹೋಲಿಸಿದರೆ ಸರಕಾರಿ ಶಾಲಾ ಮಕ್ಕಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿದೆ.
ನಾಲ್ಕನೆಯದಾಗಿ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ರಾಷ್ಟ್ರೀಯ ಪ್ರವೃತ್ತಿಯನ್ನು ಅನುಸರಿಸಿಲ್ಲ. ಇವುಗಳ ದತ್ತಾಂಶಗಳಲ್ಲಿ ಹಲವಾರು ಮಾದರಿಗಳು ಮತ್ತು ವ್ಯತ್ಯಾಸಗಳು ಕಂಡು ಬಂದಿವೆ. ಅಸ್ಸಾಂ,ಹರ್ಯಾಣ, ಹಿಮಾಚಲ ಪ್ರದೇಶ,ಜಮ್ಮುಕಾಶ್ಮೀರ,ಕರ್ನಾಟಕ, ಮಧ್ಯಪ್ರದೇಶ,ಮಹಾರಾಷ್ಟ್ರ,ರಾಜಸ್ಥಾನ,ಉತ್ತರಾಖಂಡ ಮತ್ತು ತಮಿಳುನಾಡುಗಳಂತಹ ರಾಜ್ಯಗಳು ರಾಷ್ಟ್ರೀಯ ಮಟ್ಟಕ್ಕೆ ಅನುಗುಣವಾಗಿದ್ದರೆ,ಆಂಧ್ರಪ್ರದೇಶ ಮತ್ತು ಕೇರಳದಲ್ಲಿ ಸರಕಾರಿ ಶಾಲಾಮಕ್ಕಳ ಓದುವ ಸಾಮರ್ಥ್ಯವು ಸಾಂಕ್ರಾಮಿಕದ ಕನಿಷ್ಠ ಮಟ್ಟದಿಂದ ಚೇತರಿಸಿಕೊಂಡಿಲ್ಲ.
ಬಿಹಾರದಲ್ಲಿ ಖಾಸಗಿ ಶಾಲಾಮಕ್ಕಳ ಓದುವ ಸಾಮರ್ಥ್ಯದಲ್ಲಿ ಚೇತರಿಕೆಯಾಗಿಲ್ಲ. ಛತ್ತೀಸ್ಗಡದಲ್ಲಿ ಸರಕಾರಿ ಅಥವಾ ಖಾಸಗಿ ಶಾಲಾಮಕ್ಕಳಲ್ಲಿ ಯಾವುದೇ ಚೇತರಿಕೆ ಕಂಡು ಬಂದಿಲ್ಲ.
ಕೃಪೆ: thehindu.com