ಕೇರಳದಲ್ಲಿ ಕಾನೂನು-ಸುವ್ಯವಸ್ಥೆ ಸುರಕ್ಷಿತವೆಂದು ರಾಜ್ಯಪಾಲರಿಗೆ ಈಗ ಮನದಟ್ಟಾಗಿದೆ : ಪಿಣರಾಯಿ ವ್ಯಂಗ್ಯ
ಕೋಝಿಕ್ಕೋಡ್ ಬೀದಿಯಲ್ಲಿ ಪೊಲೀಸ್ ಭದ್ರತೆಯಿಲ್ಲದೆ ಸಂಚರಿಸಿದ ರಾಜ್ಯಪಾಲ ಮುಹಮ್ಮದ್ ಆರೀಫ್ ಖಾನ್
ಪಿಣರಾಯಿ ವಿಜಯನ್ | Photo : PTI
ಹೊಸದಿಲ್ಲಿ: ಕೇರಳ ರಾಜ್ಯಪಾಲರು ಸೋಮವಾರ ಅನಿರೀಕ್ಷಿತವಾಗಿ ಕಲ್ಲಿಕೋಟೆಯ ಜನನಿಬಿಡ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ಸಂಚರಿಸಿದ ಮರುದಿನವೇ ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ರಾಜ್ಯದಲ್ಲಿ ಕಾನೂನು ಮತ್ತು ಶಿಸ್ತಿನ ಪರಿಸ್ಥಿತಿ ಸುರಕ್ಷಿತವಾಗಿದೆಯೆಂಬುದು ಆರೀಫ್ ಮುಹಮ್ಮದ್ ಖಾನ್ ಅವರಿಗೆ ಈಗಲಾದರೂ ಮನದಟ್ಟಾಗಿರಬಹುದು ಎಂದು ವ್ಯಂಗ್ಯವಾಡಿದ್ದಾರೆ.
ತಿರುವನಂತಪುರದಲ್ಲಿ ಮಂಗಳವಾರ ನಡೆದ ರಾಜ್ಯ ಸರಕಾರದ ಜಸಂಪರ್ಕ ಕಾರ್ಯಕ್ರಮ ‘ನವ ಕೇರಳ ಸದಸ್’ನ ಭಾಗವಾಗಿ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಯಾವುದೇ ಪೂರ್ವಭಾವಿ ಸೂಚನೆ ನೀಡದೆ ಹಾಗೂ ಪೊಲೀಸ್ ಭದ್ರತೆಯನ್ನು ತಿರಸ್ಕರಿಸಿ ಕಲ್ಲಿಕೋಟೆಯ ಜನನಬಿಡ ಎಸ್.ಎಂ.ಸ್ಟ್ರೀಟ್ ನಲ್ಲಿ ನಡೆದಾಡಿದ್ದಕ್ಕಾಗಿ ರಾಜ್ಯಪಾಲರನ್ನು ಪಿಣರಾಯಿ ವಿಜಯನ್ ಅವರು ತರಾಟೆಗೆ ತೆಗೆದುಕೊಂಡರು. ಪ್ರಮುಖ ಹುದ್ದೆಗಳನ್ನು ಆಲಂಕರಿಸಿರುವವರು ರೂಢಿಯಲ್ಲಿರುವ ಶಿಷ್ಟಾಚಾರಗಳ ವಿರುದ್ಧವಾಗಿ ನಡೆದುಕೊಳ್ಳುವುದು ಸಮಂಜಸವಲ್ಲ ಎಂದು ಹೇಳಿದರು.
‘‘ ಉನ್ನತ ಹುದ್ದೆಗಳನ್ನು ಆಲಂಕರಿಸಿರುವವರು ಶಿಷ್ಟಾಚಾರಗಳನ್ನು ಉಲ್ಲಂಘಿಸಿ ಈ ರೀತಿಯಾಗಿ ವರ್ತಿಸುವುದು ಸಮಂಜಸವಲ್ಲ’’ ಎಂದರು. ತನಗೆ ರಕ್ಷಣೆಯನ್ನು ಒದಗಿಸದಂತೆ ರಾಜ್ಯ ಪೊಲೀಸ್ ವರಿಷ್ಠರಿಗೆ ರಾಜ್ಯಪಾಲರು ಪತ್ರ ಬರೆದಿರುವ ಹೊರತಾಗಿಯೂ, ಅವರಿಗೆ ಕೇರಳ ಪೊಲೀಸರು ಝಡ್ ಪ್ಲಸ್ ಭದ್ರತೆಯನ್ನು ಒದಗಿಸಲಿದ್ದಾರೆ’’ ಎಂದರು.
‘‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸುಭದ್ರವಾಗಿದೆ ಎಂದು ರಾಜ್ಯಪಾಲರಿಗೆ ಈಗ ಮನದಟ್ಟಾಗಿರಬಹುದು. ಇದರೊಂದಿಗೆ, ಅವರು ಕೇರಳದಲ್ಲಿನ ಸುರಕ್ಷತೆಯ ಬಗ್ಗೆ ಇಡೀ ದೇಶಕ್ಕೆ ಮನವರಿಕೆ ಮಾಡಿದ್ದಾರೆ. ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಯು ಈ ರೀತಿ ಯಾವುದೇ ಭದ್ರತಾ ಏರ್ಪಾಡುಗಳಿಲ್ಲದೆ ಮುಕ್ತವಾಗಿ ಅತ್ತಿತ್ತ ತಿರುಗಾಡಲು ಸಾಧ್ಯವಿರುವಂತಹ ಬೇರೆ ಯಾವುದೇ ರಾಜ್ಯ ಭಾರತದಲ್ಲಿದೆಯೇ?” ಎಂದು ವಿಜಯನ್ ಪ್ರಶ್ನಿಸಿದ್ದಾರೆ.
ವಿವಿಧ ವಿಷಯಗಳಿಗೆ ಸಂಬಂಧಿಸಿ ಕೇರಳದ ಎಡರಂಗ ಸರಕಾರ ಹಾಗೂ ರಾಜಭವನ ನಡುವೆ ಬಿಕ್ಕಟ್ಟು ಉಲ್ಬಣಿಸಿರುವ ನಡುವೆ ರಾಜ್ಯ ಸರಕಾರ ಹಾಗೂ ಪೊಲೀಸರನ್ನು ಟೀಕಿಸಿದ್ದ ರಾಜ್ಯಪಾಲರ ವಿರುದ್ಧ ಪಿಣರಾಯಿ ಅವರು ಈ ರೀತಿ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದ ವಿವಿಗಳ ಉಪಕುಲಪತಿಯೂ ಆಗಿರುವ ರಾಜ್ಯಪಾಲರ ಕೆಲವು ಕ್ರಮಗಳ ವಿರುದ್ಧ ಪ್ರತಿಭಟನೆಯ ಹಾದಿ ತುಳಿದಿರುವ ಕೇರಳದ ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳ ಭಾರತೀಯ ವಿದ್ಯಾರ್ಥಿ ಒಕ್ಕೂಟ (ಎಸ್ಎಫ್ಐ)ದ ಕಾರ್ಯಕರ್ತರನ್ನು ಪಿಣರಾಯಿ ಅವರು ಸಮರ್ಥಿಸಿಕೊಂಡಿದ್ದಾರೆ.
ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ರಾಜ್ಯಪಾಲರು ಕ್ರಿಮಿನಲ್ ಗಳು ಹಾಗೂ ಗೂಂಡಾಗಳೆಂಬ ಹಣೆಪಟ್ಟಿ ಕಟ್ಟಿದ್ದಾರೆ. ಯಾಕೆಂದರೆ ಅವರು ವಿವಿ ಉಪಕುಲಪತಿಯಾಗಿ ರಾಜ್ಯಪಾಲರ ಕ್ರಮಗಳನ್ನು ಪ್ರಶ್ನಿಸಿದ್ದರು ಎಂದು ವಿಜಯನ್ ಹೇಳಿದರು.
ಕೇರಳ ರಾಜ್ಯಪಾಲ ಆರೀಫ್ ಮುಹಮ್ಮದ್ ಖಾನ್ ಅವರು ಸೋಮವಾರ ಪೊಲೀಸ್ ಭದ್ರತೆಯನ್ನು ನಿರಾಕರಿಸಿ, ಕೋಝಿಕ್ಕೋಡ್ ನಲ್ಲಿ ಸಿಹಿತಿಂಡಿಗಳಿಗೆ ಹೆಸರಾದ ‘ಮಿಠಾಯಿ ತೆರು’ ಪ್ರದೇಶಕ್ಕೆ ಭೇಟಿ ನೀಡಿದ್ದರು. ಅಲ್ಲಿ ಅವರು ಶಾಲಾ ಮಕ್ಕಳು ಸೇರಿದಂತೆ ಎಲ್ಲಾ ವಯೋಮಾನದವರೊಂದಿಗೆ ಸಂವಾದ ನಡೆಸಿದರು. ಕೆಲವು ತಾಸುಗಳ ಕಾಲ ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ ನಡೆದಾಡಿದ ಅವರು ಸಾರ್ವಜನಿಕರೊಂದಿಗೆ ಫೋಟೋ ತೆಗೆಸಿಕೊಂಡರು. ಆನಂತರ ಅವರು ಕಲ್ಲಿಕೋಟೆ ವಿವಿಯಲ್ಲಿರುವ ಅತಿಥಿಗೃಹಕ್ಕೆ ವಾಪಸಾಗಿದ್ದರು. ಅಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಸಿಪಿಎಂ ಬೆಂಬಲಿತ ಎಸ್ಏಫ್ಐ ಕಾರ್ಯಕರ್ತರು ಕಪ್ಪು ಬಲೂನ್ ಗಳು, ಬ್ಯಾನರ್ಗಳು ಹಾಗೂ ಫಲಕಗಳನ್ನು ಹಿಡಿದು, ರಾಜ್ಯಪಾಲರ ವಿರುದ್ಧ ಘೋಷಣೆಗಳನ್ನು ಕೂಗಿದ್ದರು.