10 ಮಸೂದೆಗಳನ್ನು ಮರಳಿ ಕಳುಹಿಸಿದ ರಾಜ್ಯಪಾಲ: ಮರು ಅಂಗೀಕಾರಕ್ಕೆ ತಮಿಳುನಾಡು ಸರ್ಕಾರ ಸಿದ್ಧತೆ
ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ (PTI)
ಚೆನ್ನೈ: ತಮ್ಮ ಸಮ್ಮತಿಗಾಗಿ ಕಳುಹಿಸಲಾಗಿದ್ದ ಮಸೂದೆಗಳನ್ನು ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ವಾಪಸ್ ಕಳಿಸಿದ್ದು, ಈ ಮಸೂದೆಗಳನ್ನು ನವೆಂಬರ್ 18ರಂದು ನಡೆಯಲಿರುವ ವಿಶೇಷ ಅಧಿವೇಶನದಲ್ಲಿ ಮರು ಅಂಗೀಕರಿಸಲು ತಮಿಳುನಾಡು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ ಎಂದು ವರದಿಯಾಗಿದೆ.
ತಿರುವಣ್ಣಾಮಲೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಸಭಾಧ್ಯಕ್ಷ ಎಂ.ಅಪ್ಪವು, ಶನಿವಾರ ವಿಶೇಷ ಅಧಿವೇಶವನ್ನು ನಡೆಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ತಮ್ಮ ಒಪ್ಪಿಗೆಗಾಗಿ ಕಳುಹಿಸಲಾಗಿದ್ದ ಹಲವಾರು ಮಸೂದೆಗಳನ್ನು ರಾಜ್ಯಪಾಲ ರವಿ ಸರ್ಕಾರಕ್ಕೆ ಮರಳಿಸಿದ್ದಾರೆ ಎಂದು ನನಗೆ ತಿಳಿದು ಬಂದಿದ್ದು, ಈ ಹಿನ್ನೆಲೆಯಲ್ಲಿ ವಿಶೇಷ ಅಧಿವೇಶವನ್ನು ಕರೆಯಲಾಗಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯ ಸರ್ಕಾರವು ಈ ಮಸೂದೆಗಳನ್ನು ಮರು ಅಂಗೀಕರಿಸಲು ನಿರ್ಧರಿಸಿದ್ದು, ಹೀಗಾಗಿ ನವೆಂಬರ್ 18ರಂದು ವಿಶೇಷ ಅಧಿವೇಶನ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ವಿಧಾನಸಭೆಯು ಅಂಗೀಕರಿಸಿರುವ ಮಸೂದೆಗಳನ್ನು ರಾಜ ಭವನವು ತಡೆ ಹಿಡಿದಿದೆ ಎಂದು ಆರೋಪಿಸಿ ಡಿಎಂಕೆ ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ರಾಜ್ಯಪಾಲರ ಬಳಿ ನಾಲ್ಕು ಅಧಿಕೃತ ಆದೇಶಗಳು ಹಾಗೂ 54 ಕೈದಿಗಳ ಅವಧಿಪೂರ್ವ ಬಿಡುಗಡೆಯ ಪ್ರಸ್ತಾವನೆಯನ್ನು ಹೊರತುಪಡಿಸಿ, ಕನಿಷ್ಠ 12 ಮಸೂದೆಗಳು ಬಾಕಿ ಉಳಿದಿವೆ. ರಾಜ್ಯಪಾಲ ರವಿ ಅವರು ಎಷ್ಟು ಮಸೂದೆಗಳನ್ನು ಹಿಂದಕ್ಕೆ ಮರಳಿಸಿದ್ದಾರೆ ಎಂಬ ಸಂಗತಿ ಇನ್ನೂ ಸ್ಪಷ್ಟವಾಗಿಲ್ಲ. ವಿಧಾನಸಭೆಯು ಅಕ್ಟೋಬರ್ ತಿಂಗಳಲ್ಲಿ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿತ್ತು.
ಇದಕ್ಕೂ ಮುನ್ನ, ನವೆಂಬರ್ 10ರಂದು ವಿಧಾನಸಭೆ ಅಂಗೀಕರಿಸಿರುವ ಮಸೂದೆಗಳಿಗೆ ಸಮ್ಮತಿ ನೀಡಲು ರಾಜ್ಯಪಾಲ ರವಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂಬ ಆರೋಪದ ಕುರಿತು ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿತ್ತು. 12 ಮಸೂದೆಗಳನ್ನು ರಾಜಭವನ ತಡೆ ಹಿಡಿದಿದೆ ಎಂಬ ಆರೋಪದ ಕುರಿತು ತನ್ನ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು.