ಒಟಿಟಿ ವೇದಿಕೆಗಳಿಗಳಿಂದ ಪಾಕಿಸ್ತಾನದ ವೆಬ್ ಸೀರೀಸ್ ತೆಗೆದುಹಾಕುವಂತೆ ಕೇಂದ್ರ ಸರಕಾರದ ಸಲಹೆ

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ತಕ್ಷಣದಿಂದಲೇ ಜಾರಿಗೆ ಬರುವಂತೆ ವೆಬ್ ಸರಣಿಗಳು, ಚಲನಚಿತ್ರಗಳು ಹಾಗೂ ಪಾಡ್ ಕಾಸ್ಟ್ ಗಳು ಸೇರಿದಂತೆ ಪಾಕಿಸ್ತಾನ ಮೂಲದ ಎಲ್ಲ ತುಣುಕುಗಳ ಪ್ರಸಾರವನ್ನು ಸ್ಥಗಿತಗೊಳಿಸಬೇಕು ಎಂದು ಗುರುವಾರ ಒಟಿಟಿ ವೇದಿಕೆಗಳಿಗೆ ಕೇಂದ್ರ ಸರಕಾರ ಸಲಹೆ ನೀಡಿದೆ.
ಎಪ್ರಿಲ್ 22ರಂದು ನಡೆದಿದ್ದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ನಡೆಸುತ್ತಿರುವ ವಾಯು ದಾಳಿಯ ಹಿನ್ನೆಲೆಯಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಈ ಸಲಹಾಸೂಚಿಯನ್ನು ಬಿಡುಗಡೆ ಮಾಡಿದೆ.
“ರಾಷ್ಟ್ರೀಯ ಭದ್ರತಾ ಹಿತಾಸಕ್ತಿಯ ಹಿನ್ನೆಲೆಯಲ್ಲಿ, ಭಾರತದಲ್ಲಿ ಕಾರ್ಯಾಚರಿಸುತ್ತಿರುವ ಎಲ್ಲ ಒಟಿಟಿ ವೇದಿಕೆಗಳು, ಮಾಧ್ಯಮ ಪ್ರಸಾರ ವೇದಿಕೆಗಳು ಹಾಗೂ ಮಧ್ಯವರ್ತಿ ಸಂಸ್ಥೆಗಳು ತಕ್ಷಣದಿಂದಲೇ ಜಾರಿಗೆ ಬರುವಂತೆ ಚಂದಾದಾರಿಕೆ ಆಧಾರದಲ್ಲಿ ಅಥವಾ ಇನ್ನಿತರ ಬಗೆಯಲ್ಲಿ ಲಭ್ಯವಿರುವ ಪಾಕಿಸ್ತಾನ ಮೂಲದ ಎಲ್ಲ ವೆಬ್ ಸರಣಿಗಳು, ಚಲನಚಿತ್ರಗಳು, ಗೀತೆಗಳು, ಪಾಡ್ ಕಾಸ್ಟ್ ಗಳು ಹಾಗೂ ಇನ್ನಿತರ ಮಾಧ್ಯಮ ತುಣುಕುಗಳ ಪ್ರಸಾರವನ್ನು ಸ್ಥಗಿತಗೊಳಿಸಬೇಕು” ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸಲಹಾಸೂಚಿ ಬಿಡುಗಡೆ ಮಾಡಿದೆ.







