ನ್ಯಾಯಾಲಯ ಏನು ಹೇಳುತ್ತದೋ ಅದನ್ನು ಸರ್ಕಾರ ಪಾಲಿಸುತ್ತದೆ: ಮಧ್ಯಪ್ರದೇಶದ ಸಿಎಂ
ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ಸಚಿವ ವಿಜಯ್ ಶಾ ಆಕ್ಷೇಪಾರ್ಹ ಹೇಳಿಕೆ ವಿವಾದ

ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ (PTI)
ಭೋಪಾಲ್ : ನ್ಯಾಯಾಲಯದ ಆದೇಶಗಳನ್ನು ತಮ್ಮ ಸರ್ಕಾರ ಪಾಲಿಸುತ್ತದೆ. ಕರ್ನಲ್ ಸೋಫಿಯಾ ಖುರೇಷಿ ಅವರನ್ನು ಗುರಿಯಾಗಿಸಿಕೊಂಡು ಸಚಿವ ವಿಜಯ್ ಶಾ ಅವರ ಆಕ್ಷೇಪಾರ್ಹ ಹೇಳಿಕೆಗಳ ವಿಚಾರದಲ್ಲಿಯೂ ಸರ್ಕಾರ ಅದನ್ನೇ ಪಾಲಿಸಲಿದೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಹೇಳಿದ್ದಾರೆ.
ಬುಡಕಟ್ಟು ವ್ಯವಹಾರಗಳ ಸಚಿವ ಕುನ್ವರ್ ವಿಜಯ್ ಶಾ ಅವರ ರಾಜೀನಾಮೆಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಈ ಹೇಳಿಕೆ ನೀಡಿದ್ದಾರೆ.
ಸಚಿವ ಶಾ ಅವರ ರಾಜೀನಾಮೆಗೆ ಒತ್ತಾಯಿಸಲು ಕಾಂಗ್ರೆಸ್ಗೆ ಯಾವುದೇ ನೈತಿಕ ಹಕ್ಕಿಲ್ಲ ಎಂದ ಅವರು, ವಿರೋಧ ಪಕ್ಷವು ಮೊದಲು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹುದ್ದೆಯಿಂದ ಕೆಳಗಿಳಿಯುವಂತೆ ಆಗ್ರಹಿಸಬೇಕು ಎಂದು ಅವರು ಹೇಳಿದರು.
ಇಲ್ಲಿನ ರೋಶನ್ಪುರ ಚೌಕದಲ್ಲಿ ಬಿಜೆಪಿ ಪ್ರಾರಂಭಿಸಿದ ತಿರಂಗ ಯಾತ್ರೆಯ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಮೋಹನ್ ಯಾದವ್, “ನ್ಯಾಯಾಂಗವು ನೀಡುವ ಆದೇಶವನ್ನು, ನಮ್ಮ ಸರ್ಕಾರ ಅದನ್ನು ಪಾಲಿಸಿದೆ. ಈ ವಿಚಾರದಲ್ಲಿ ನ್ಯಾಯಾಲಯವು ಏನು ಹೇಳುತ್ತದೆಯೋ, ನಾವು ಅದರಂತೆ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತೇವೆ” ಎಂದು ಹೇಳಿದರು.
" ಮುಖ್ಯಮಂತ್ರಿಯಾಗಿದ್ದಾಗ ಜೈಲಿಗೆ ಹೋದರೂ, ದಿಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಕಾಂಗ್ರೆಸ್ ಬೆಂಬಲಿಸಿದೆ. ಆ ಸಮಯದಲ್ಲಿ ಕಾಂಗ್ರೆಸ್ ಎಲ್ಲಿತ್ತು? ಕಾಂಗ್ರೆಸ್ ಗೆ ಮಾತನಾಡುವ ಹಕ್ಕಿಲ್ಲ" ಎಂದು ಸಚಿವ ವಿಜಯ್ ರಾಜೀನಾಮೆ ಕೇಳುತ್ತಿರುವ ಕಾಂಗ್ರೆಸ್ ಗೆ ತಿರುಗೇಟು ನೀಡಿದರು.
ಸೋಮವಾರ ಇಂದೋರ್ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಸಚಿವ ವಿಜಯ್ ಶಾ ಅವರು ಕರ್ನಲ್ ಸೋಫಿಯಾ ಖುರೇಷಿಯವರನ್ನು ಕುರಿತು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು.
ಈ ಹೇಳಿಕೆಗಳ ಕುರಿತು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿದ ಮಧ್ಯಪ್ರದೇಶ ಹೈಕೋರ್ಟ್ ಬುಧವಾರ ಅವರ ವಿರುದ್ಧ ಎಫ್ಐಆರ್ ದಾಖಲಿಸಲು ಆದೇಶಿಸಿತ್ತು.







