LPG ಕೊರತೆ ಹಿನ್ನೆಲೆ | ನೈಸರ್ಗಿಕ ಅನಿಲ ಪೂರೈಕೆ ನಿಯಂತ್ರಣಕ್ಕೆ ʼಅಗತ್ಯ ಸರಕುಗಳ ಕಾಯ್ದೆʼ ಜಾರಿಗೆ ತಂದ ಕೇಂದ್ರ ಸರಕಾರ

Photo: PTI
ಹೊಸದಿಲ್ಲಿ: ದೇಶದಲ್ಲಿ ಎಲ್ಪಿಜಿ ಕೊರತೆ ಬಗ್ಗೆ ಆತಂಕ ಹೆಚ್ಚುತ್ತಿರುವ ಹಾಗೂ ಹೋಟೆಲ್ ಸಂಘಗಳು ಎಲ್ಪಿಜಿ ಪೂರೈಕೆಯನ್ನು ನಿಯಂತ್ರಿಸುವಂತೆ ಆಗ್ರಹಿಸುತ್ತಿರುವ ಹಿನ್ನೆಲೆಯಲ್ಲಿ, ಕೇಂದ್ರ ಸರಕಾರ ಮಂಗಳವಾರ 1955ರ ಅಗತ್ಯ ಸರಕುಗಳ ಕಾಯ್ದೆ(Essential Commodities Act)ಯನ್ನು ಜಾರಿಗೆ ತಂದಿದೆ.
ಪೆಟ್ರೋಲಿಯಂ ಮತ್ತು ಪೆಟ್ರೋಲಿಯಂ ಉತ್ಪನ್ನಗಳು ಹಾಗೂ ನೈಸರ್ಗಿಕ ಅನಿಲದ ಲಭ್ಯತೆ, ಪೂರೈಕೆ ಮತ್ತು ಸಮಾನ ವಿತರಣೆಯನ್ನು ನಿಯಂತ್ರಿಸಲು ಈ ಸಂಬಂಧ ಅಧಿಸೂಚನೆ ಹೊರಡಿಸಲಾಗಿದೆ. ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್ಪಿಜಿ) ಉತ್ಪಾದನೆಯನ್ನು ಗರಿಷ್ಠಗೊಳಿಸಲು ಮತ್ತು ಪ್ರಮುಖ ಹೈಡ್ರೋಕಾರ್ಬನ್ ಹರಿವುಗಳನ್ನು ಎಲ್ಪಿಜಿ ಪೂಲ್ಗೆ ತಿರುಗಿಸಲು ಸಂಸ್ಕರಣಾಗಾರಗಳು ಹಾಗೂ ಪೆಟ್ರೋಕೆಮಿಕಲ್ ಘಟಕಗಳಿಗೆ ಸರಕಾರ ನಿರ್ದೇಶನ ನೀಡಿದೆ.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ಪರಿಣಾಮವಾಗಿ ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವ ದ್ರವೀಕೃತ ನೈಸರ್ಗಿಕ ಅನಿಲ (ಎಲ್ಎನ್ಜಿ) ಸಾಗಣೆಯಲ್ಲಿ ಅಡ್ಡಿ ಉಂಟಾಗಿದೆ ಎಂದು ಕೇಂದ್ರ ಸರಕಾರ ಹೇಳಿದೆ. ಪೂರೈಕೆದಾರರು ‘ಫೋರ್ಸ್ ಮಜ್ಯೂರ್’ (ಅಪರಿಹಾರ್ಯ ಪರಿಸ್ಥಿತಿ) ಷರತ್ತನ್ನು ಅನ್ವಯಿಸಿರುವುದರಿಂದ ನೈಸರ್ಗಿಕ ಅನಿಲವನ್ನು ಆದ್ಯತೆಯ ವಲಯಗಳಿಗೆ ಮರುಹಂಚಿಕೆ ಮಾಡುವ ಪರಿಸ್ಥಿತಿ ಉಂಟಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಪೆಟ್ರೋಲಿಯಂ ಮತ್ತು ಪೆಟ್ರೋಲಿಯಂ ಉತ್ಪನ್ನಗಳು 1955ರ ಅಗತ್ಯ ಸರಕುಗಳ ಕಾಯ್ದೆಯ ಶೆಡ್ಯೂಲ್ನ ನಮೂದು–5ರ ಅಡಿಯಲ್ಲಿ ಒಳಗೊಂಡಿವೆ. ಪೆಟ್ರೋಲಿಯಂ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆ, ವಿತರಣೆ ಮತ್ತು ಅದಕ್ಕೆ ಸಂಬಂಧಿಸಿದ ವ್ಯಾಪಾರ–ವಾಣಿಜ್ಯವನ್ನು ನಿಯಂತ್ರಿಸಲು, ಅವುಗಳ ಸರಬರಾಜನ್ನು ನಿರ್ವಹಿಸಲು ಅಥವಾ ಹೆಚ್ಚಿಸಲು ಹಾಗೂ ಸಮಾನ ವಿತರಣೆಯನ್ನು ಖಚಿತಪಡಿಸಲು ಅಗತ್ಯವಿದ್ದಲ್ಲಿ ಕೇಂದ್ರ ಸರ್ಕಾರಕ್ಕೆ ಕಾಯ್ದೆಯ ಸೆಕ್ಷನ್–3ರ ಅಡಿಯಲ್ಲಿ ಅಧಿಕಾರವಿದೆ ಎಂದು ಅಧಿಸೂಚನೆಯಲ್ಲಿ ವಿವರಿಸಲಾಗಿದೆ.
ಆದೇಶದ ಪ್ರಕಾರ, ಕೆಲವು ವಲಯಗಳಿಗೆ ನೈಸರ್ಗಿಕ ಅನಿಲದ ಸರಬರಾಜನ್ನು ಆದ್ಯತೆಯ ಹಂಚಿಕೆ ಎಂದು ಪರಿಗಣಿಸಲಾಗುತ್ತದೆ. ಕಾರ್ಯಾಚರಣೆಯ ಲಭ್ಯತೆಗೆ ಒಳಪಟ್ಟು, ಈ ವಲಯಗಳಿಗೆ ಕಳೆದ ಆರು ತಿಂಗಳ ಸರಾಸರಿ ಅನಿಲ ಬಳಕೆಯ 100 ಪ್ರತಿಶತದಷ್ಟು ಪೂರೈಕೆ ಒದಗಿಸಲಾಗುತ್ತದೆ. ಇದರಲ್ಲಿ Domestic Piped Natural Gas (PNG) ಪೂರೈಕೆ, ಸಾರಿಗೆಗೆ ಬಳಸುವ Compressed Natural Gas (CNG), ಪೈಪ್ಲೈನ್ ಕಂಪ್ರೆಸರ್ ಇಂಧನ ಮತ್ತು ಇತರ ಅಗತ್ಯ ಪೈಪ್ಲೈನ್ ಕಾರ್ಯಾಚರಣೆಗಳು ಸೇರಿವೆ.
ರಸಗೊಬ್ಬರ ಕಾರ್ಖಾನೆಗಳಿಗೆ ನೈಸರ್ಗಿಕ ಅನಿಲ ಪೂರೈಕೆಯನ್ನು ಕಾರ್ಯಾಚರಣೆಯ ಲಭ್ಯತೆಗೆ ಒಳಪಟ್ಟು ಕಳೆದ ಆರು ತಿಂಗಳ ಸರಾಸರಿ ಬಳಕೆಯ 70 ಪ್ರತಿಶತದಷ್ಟು ಖಚಿತಪಡಿಸಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ರಾಷ್ಟ್ರೀಯ ಅನಿಲ ಜಾಲದ ಮೂಲಕ ಅನಿಲ ಪಡೆಯುವ ಚಹಾ ಕೈಗಾರಿಕೆಗಳು, ಉತ್ಪಾದನಾ ಘಟಕಗಳು ಮತ್ತು ಇತರ ಕೈಗಾರಿಕಾ ಗ್ರಾಹಕರಿಗೆ ಅನಿಲ ಪೂರೈಕೆಯನ್ನು ಕಾರ್ಯಾಚರಣೆಯ ಲಭ್ಯತೆಗೆ ಒಳಪಟ್ಟು ಕಳೆದ ಆರು ತಿಂಗಳ ಸರಾಸರಿ ಬಳಕೆಯ 80 ಪ್ರತಿಶತದ ಮಟ್ಟದಲ್ಲಿ ನಿರ್ವಹಿಸುವಂತೆ ಅನಿಲ ಮಾರುಕಟ್ಟೆ ಸಂಸ್ಥೆಗಳಿಗೆ ಸೂಚಿಸಲಾಗಿದೆ.
ನಗರ ಅನಿಲ ವಿತರಣಾ ಸಂಸ್ಥೆಗಳು ತಮ್ಮ ಜಾಲದ ಮೂಲಕ ಪೂರೈಕೆ ಮಾಡುವ ಕೈಗಾರಿಕಾ ಮತ್ತು ವಾಣಿಜ್ಯ ಗ್ರಾಹಕರು ಕಾರ್ಯಾಚರಣೆಯ ಲಭ್ಯತೆಗೆ ಒಳಪಟ್ಟು ಕಳೆದ ಆರು ತಿಂಗಳ ಸರಾಸರಿ ಅನಿಲ ಬಳಕೆಯ 80 ಪ್ರತಿಶತವನ್ನು ಪಡೆಯುವಂತೆ ಖಚಿತಪಡಿಸಬೇಕೆಂದು ಸೂಚಿಸಲಾಗಿದೆ.
ಎಲ್ಎನ್ಜಿ ಪೂರೈಕೆಯ ಅಡಚಣೆಯ ಪರಿಣಾಮವನ್ನು ಸಾಧ್ಯವಾದಷ್ಟು ಹೀರಿಕೊಳ್ಳಲು ತೈಲ ಸಂಸ್ಕರಣಾ ಕಂಪೆನಿಗಳಿಗೆ ಸಂಸ್ಕರಣಾಗಾರಗಳ ಅನಿಲ ಹಂಚಿಕೆಯನ್ನು ಕಾರ್ಯಾಚರಣೆಯ ಸಾಧ್ಯತೆಗೆ ಒಳಪಟ್ಟು ಕಳೆದ ಆರು ತಿಂಗಳ ಬಳಕೆಯ ಸುಮಾರು 65 ಪ್ರತಿಶತಕ್ಕೆ ಇಳಿಸಲು ಸರಕಾರ ಸೂಚಿಸಿದೆ.
ಎಲ್ಎನ್ಜಿ ಮತ್ತು ಮರು ಅನಿಲೀಕರಿಸಿದ ಎಲ್ಎನ್ಜಿ ಸೇರಿದಂತೆ ನೈಸರ್ಗಿಕ ಅನಿಲದ ಉತ್ಪಾದನೆ, ಆಮದು, ಸಂಗ್ರಹಣೆ, ಹಂಚಿಕೆ, ಪೂರೈಕೆ ಮತ್ತು ಬಳಕೆಗೆ ಸಂಬಂಧಿಸಿದ ಮಾಹಿತಿಯನ್ನು ಪ್ರತಿಯೊಬ್ಬ ಉತ್ಪಾದಕ, ಆಮದುದಾರ, ದಾಸ್ತಾನು ಹಾಗೂ ವಿತರಕರು ಕೇಂದ್ರ ಸರ್ಕಾರಕ್ಕೆ ಅಥವಾ ಅದರಿಂದ ಅಧಿಕೃತಗೊಳಿಸಲಾದ ಅಧಿಕಾರಿಗಳಿಗೆ ಒದಗಿಸಬೇಕೆಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.







