ವಂಚನೆಗಳಿಗೆ ಕಡಿವಾಣ ಹಾಕಲು 2,000 ರೂ.ಗೂ ಹೆಚ್ಚಿನ ಮೊದಲ UPI ವರ್ಗಾವಣೆ ನಾಲ್ಕು ಗಂಟೆ ವಿಳಂಬಗೊಳ್ಳುವ ಸಾಧ್ಯತೆ
Photo Source: PTI
ಹೊಸದಿಲ್ಲಿ: ಹೆಚ್ಚುತ್ತಿರುವ ಆನ್ಲೈನ್ ಪಾವತಿ ವಂಚನೆಗಳನ್ನು ನಿಗ್ರಹಿಸಲು ಇಬ್ಬರು ವ್ಯಕ್ತಿಗಳ ನಡುವೆ ಮೊದಲ ಬಾರಿಗೆ ನಡೆಯುವ, ನಿರ್ದಿಷ್ಟ ಮೊತ್ತವನ್ನು ಮೀರಿದ ವಹಿವಾಟು ಪೂರ್ಣಗೊಳ್ಳಲು ಕನಿಷ್ಠ ಅವಧಿಯನ್ನು ನಿಗದಿಗೊಳಿಸಲು ಸರಕಾರವು ಯೋಜಿಸುತ್ತಿದೆ. ಪ್ರಾಯಶಃ 2,000 ರೂ.ಮೀರಿದ ಎಲ್ಲ ವಹಿವಾಟುಗಳಲ್ಲಿ ಡಿಜಿಟಲ್ ಪಾವತಿಗಳಿಗೆ ಇಬ್ಬರು ಬಳಕೆದಾರರ ನಡುವಿನ ಮೊದಲ ವ್ಯವಹಾರಕ್ಕೆ ಸಂಭಾವ್ಯ ನಾಲ್ಕು ಗಂಟೆಗಳ ವಿಳಂಬ ಸರಕಾರದ ಯೋಜನೆಯಲ್ಲಿ ಒಳಗೊಂಡಿರುವ ಸಾಧ್ಯತೆಯಿದೆ ಎಂದು indianexpress.com ವರದಿ ಮಾಡಿದೆ.
ಈ ಕ್ರಮವು ಡಿಜಿಟಲ್ ಪಾವತಿಗಳಿಗೆ ಕೊಂಚ ವ್ಯತ್ಯಯವನ್ನುಂಟು ಮಾಡುವ ನಿರೀಕ್ಷೆಯಿದೆ, ಆದರೆ ಸೈಬರ್ ಸುರಕ್ಷತಾ ಕಳವಳಗಳನ್ನು ತಗ್ಗಿಸಲು ಇದು ಅಗತ್ಯವಾಗಿದೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯವಾಗಿದೆ. ಯೋಜನೆಯು ಅಂತಿಮಗೊಂಡರೆ ಈ ಕ್ರಮವು ಐಎಂಪಿಎಸ್, ಆರ್ಟಿಜಿಎಸ್ ಜೊತೆಗೆ ಯುಪಿಐ ಮೂಲಕವೂ ಡಿಜಿಟಲ್ ಪಾವತಿಗಳ ವ್ಯಾಪಕ ಶ್ರೇಣಿಯನ್ನು ಒಳಗೊಂಡಿರಲಿದೆ.
ಖಚಿತವಾಗಿ ಹೇಳುವುದಾದರೆ ಸರಕಾರದ ಯೋಜನೆಯು ಖಾತೆ ಸೃಷ್ಟಿಯಾದ ಬಳಿಕ ಮೊದಲ ವಹಿವಾಟನ್ನು ವಿಳಂಬ ಅಥವಾ ಸೀಮಿತಗೊಳಿಸುವುದು ಮಾತ್ರವಲ್ಲ,ಇಬ್ಬರು ಬಳಕೆದಾರರ ಸ್ವತಂತ್ರ ಹಿಂದಿನ ವಹಿವಾಟು ಇತಿಹಾಸದ ಹೊರತಾಗಿಯೂ ಅವರ ನಡುವಿನ ಪ್ರತಿ ಮೊದಲ ವಹಿವಾಟನ್ನು ನಿಯಂತ್ರಿಸಲಿದೆ.
ಉದಾಹರಣೆಗೆ ಪ್ರಸ್ತುತ, ಬಳಕೆದಾರನೋರ್ವ ಹೊಸ ಯುಪಿಐ ಖಾತೆಯನ್ನು ಸೃಷ್ಟಿಸಿದಾಗ ಆತ ಮೊದಲ 24 ಗಂಟೆಗಳಲ್ಲಿ ಗರಿಷ್ಠ 5,000 ರೂ.ಗಳನ್ನು ರವಾನಿಸಬಹುದು. ಇದೇ ರೀತಿ ನೆಫ್ಟ್ ವಿಷಯದಲ್ಲಿ ಫಲಾನುಭವಿಯ ಖಾತೆಯನ್ನು ಸಕ್ರಿಯಗೊಳಿಸಿದ ಬಳಿಕ ಮೊದಲ 24 ಗಂಟೆಗಳಲ್ಲಿ 50,000 ರೂ.ವರೆಗೆ ರವಾನಿಸಬಹುದು.
ಆದರೆ ಸರಕಾರದ ಮುಂದಿರುವ ಯೋಜನೆಯಂತೆ ಬಳಕೆದಾರನೋರ್ವ ತಾನೆಂದಿಗೂ ವ್ಯವಹರಿಸಿರದ ಇನ್ನೋರ್ವ ಬಳಕೆದಾರನಿಗೆ 2,000 ರೂ.ಗೂ ಅಧಿಕ ಹಣವನ್ನು ರವಾನಿಸಿದ ಪ್ರತಿಸಲವೂ ವಹಿವಾಟು ಪೂರ್ಣಗೊಳ್ಳಲು ನಾಲ್ಕು ಗಂಟೆಗಳ ಕನಿಷ್ಠ ಅವಧಿ ಅನ್ವಯಗೊಳ್ಳುತ್ತದೆ.
‘ಪ್ರಾಥಮಿಕವಾಗಿ ಇದು ಹೇಗೆ ಕೆಲಸ ಮಾಡುತ್ತದೆಯೆಂದರೆ,ಮೊದಲ ಬಾರಿಗೆ ಯಾರಿಗಾದರೂ ಹಣ ಪಾವತಿಸಿದ ಬಳಿಕ ಅದನ್ನು ಹಿಂಪಡೆಯಲು ಅಥವಾ ಪರಿಷ್ಕರಿಸಲು ನಾಲ್ಕು ಗಂಟೆಗಳ ಅವಕಾಶವಿರುತ್ತದೆ. ಅದು ಕೆಲವು ಗಂಟೆಗಳಲ್ಲಿ ವಹಿವಾಟು ಪೂರ್ಣಗೊಳ್ಳುವ ನೆಫ್ಟ್ ಮಾದರಿಯಲ್ಲಿರಲಿದೆ. ಆರಂಭದಲ್ಲಿ ಮೊತ್ತಕ್ಕೆ ಯಾವುದೇ ಕನಿಷ್ಠ ಮಿತಿಯನ್ನು ನಿಗದಿಗೊಳಿಸಲು ನಾವು ಬಯಸಿರಲಿಲ್ಲ,ಆದರೆ ಉದ್ಯಮದೊಂದಿಗೆ ಅನೌಪಚಾರಿಕ ಚರ್ಚೆಗಳ ಬಳಿಕ ಇದರಿಂದ ದಿನಸಿ ಇತ್ಯಾದಿಗಳ ಸಣ್ಣ ಪ್ರಮಾಣದ ಖರೀದಿಗಳಿಗೆ ತೊಂದರೆಯಾಗುತ್ತದೆ ಎನ್ನುವುದನ್ನು ನಾವು ಅರಿತುಕೊಂಡಿದ್ದೇವೆ. ಹೀಗಾಗಿ 2,000 ರೂ.ಗಿಂತ ಕಡಿಮೆ ವಹಿವಾಟುಗಳಿಗೆ ಕನಿಷ್ಠ ಅವಧಿಯಿಂದ ವಿನಾಯಿತಿ ನೀಡಲು ಯೋಜಿಸುತ್ತಿದ್ದೇವೆ ’ಎಂದು ಹಿರಿಯ ಸರಕಾರಿ ಅಧಿಕಾರಿಯೋರ್ವರು ತಿಳಿಸಿದರು.