ದೇಶಾದ್ಯಂತ 10 ಸಾವಿರ ಎಂಬಿಬಿಎಸ್, ಪಿಜಿ ಸೀಟುಗಳ ಸೇರ್ಪಡೆಗೆ ಕೇಂದ್ರ ಸರಕಾರ ಅಸ್ತು

Photo Credit: The Hindu
ಹೊಸದಿಲ್ಲಿ,ಸೆ.25: ಮುಂದಿನ ಮೂರು ವರ್ಷಗಳಲ್ಲಿ 15,034 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ಈಗ ಅಸ್ತಿತ್ವದಲ್ಲಿರುವ ಸರಕಾರಿ ವೈದ್ಯಕೀಯ ಕಾಲೇಜುಗಳು ಹಾಗೂ ಸಂಸ್ಥೆಗಳಲ್ಲಿ 5023 ಎಂಬಿಬಿಎಸ್ ಸೀಟುಗಳು ಹಾಗೂ 5 ಸಾವಿರ ಸ್ನಾತಕೋತ್ತರ ವೈದ್ಯಕೀಯ ಸೀಟುಗಳನ್ನು ಸೇರ್ಪಡೆಗೊಳಿಸುವ ಮೂರನೇ ಹಂತದ ಯೋಜನೆಗೆ ಕೇಂದ್ರ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ಮುಂದಿನ ಐದು ವರ್ಷಗಳಲ್ಲಿ 75 ಸಾವಿರಕ್ಕೂ ಅಧಿಕ ನೂತನ ವೈದ್ಯಕೀಯ ಸೀಟುಗಳನ್ನು ಸೇರ್ಪಡೆಗೊಳಿಸುವ ಯೋಜನೆಯನ್ನು ಕೇಂದ್ರ ಸರಕಾರ ಹೊಂದಿರುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ವರ್ಷದ ಬಜೆಟ್ನಲ್ಲಿ ಘೋಷಿಸಿದ್ದರು. ಮೊದಲ ಹಂತದಲ್ಲಿ ಕೇಂದ್ರ ಸರಕಾರವು 83 ಮೆಡಿಕಲ್ ಕಾಲೇಜ್ಗಳಲ್ಲಿ 4977 ಎಂಬಿಬಿಎಸ್ ಸೀಟುಗಳನ್ನು ಸೇರ್ಪಡೆಗೊಳಿಸಲು 5972 ಕೋಟಿ ರೂ. ಹಾಗೂ 72 ಕಾಲೇಜ್ಗಳಲ್ಲಿ 4058 ಸ್ನಾತಕೋತ್ತರ ಸೀಟುಗಳ ಸೇರ್ಪಡೆಗೆ 1498 ಕೋಟಿ ರೂ. ನೀಡಿತ್ತು. ಎರಡನೇ ಹಂತದಲ್ಲಿ ಕೇಂದ್ರ ಸರಕಾರವು 65 ಕಾಲೇಜುಗಳಲ್ಲಿ ಎರಡೂ ಕೋರ್ಸ್ಗಳು ಸೇರಿ 4 ಸಾವಿರ ಸೀಟುಗಳ ಸೇರ್ಪಡೆಗೆ 4,478 ಕೋಟಿ ರೂ. ನೀಡಿತ್ತು.
ಈಗ ಅಸ್ತಿತ್ವದಲ್ಲಿರುವ ಜಿಲ್ಲಾ ಆಸ್ಪತ್ರೆಗಳ ಜೊತೆ ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆ ಸೇರಿದಂತೆ ದೇಶದಲ್ಲಿ ವೈದ್ಯಕೀಯ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಲು ಕೇಂದ್ರ ಸರಕಾರವು ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ.
ಪ್ರಸಕ್ತ ದೇಶಾದ್ಯಂತ ಅಂದಾಜು 1.2 ಲಕ್ಷ ಎಂಬಿಬಿಎಸ್ ಸೀಟುಗಳು ಹಾಗೂ 74,306 ಸ್ನಾತಕೋತ್ತರ ವೈದ್ಯಕೀಯ ಕಾಲೇಜುಗಳಿವೆ. ಇದು 2014ರಲ್ಲಿ ಲಭ್ಯವಿದ್ದ 51,328 ಎಂಬಿಬಿಎಸ್ ಸೀಟುಗಳು ಹಾಗೂ 31,185 ಸ್ನಾತಕೋತ್ತರ ವೈದ್ಯಕೀಯ ಸೀಟುಗಳಿಗಿಂತ ಎರಡು ಪಟ್ಟು ಅಧಿಕವಾಗಿದೆ.
ದೇಶದಲ್ಲಿ ವೈದ್ಯಕೀಯ ಸೀಟುಗಳಿಗೆ ಭಾರೀ ಬೇಡಿಕೆಯಿದ್ದು, ಪ್ರತಿ ವರ್ಷ 20 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಲು ಕೇಂದ್ರ ಸರಕಾರವು ಯೋಜನೆಯನ್ನು ರೂಪಿಸುತ್ತಿದೆ.







