ಐಟಿ ನಿಯಮ ಉಲ್ಲಂಘಿಸುವ ಸಾಮಾಜಿಕ ಜಾಲತಾಣಗಳ ವಿರುದ್ಧ ದೂರು ದಾಖಲಿಸಲು ನಾಗರಿಕರಿಗೆ ನೆರವಾಗಲಿರುವ ಸರ್ಕಾರ

ಐಟಿ ಸಚಿವ ರಾಜೀವ್ ಚಂದ್ರಶೇಖರ್ (PTI)
ಹೊಸದಿಲ್ಲಿ: ಡೀಪ್ ಫೇಕ್ನಂತಹ ಆಕ್ಷೇಪಾರ್ಹ ವಿಚಾರಗಳಿಂದ ಯಾರಾದರೂ ಬಾಧಿತರಾಗಿದ್ದರೆ ಅಂತಹ ನಾಗರಿಕರಿಗೆ ಐಟಿ ನಿಯಮಗಳ ಉಲ್ಲಂಘನೆ ಮಾಡಿದ ಸಾಮಾಜಿಕ ಜಾಲತಾಣಗಳ ವಿರುದ್ಧ ಎಫ್ಐಆರ್ ದಾಖಲಿಸಲು ಸರ್ಕಾರ ಸಹಾಯ ಮಾಡಲಿದೆ.
ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಇದಕ್ಕಾಗಿ ಒಂದು ಪ್ಲ್ಯಾಟ್ಫಾರ್ಮ್ ಅಭಿವೃದ್ಧಿಪಡಿಸಲಿದ್ದು ಈ ಮೂಲಕ ಸಾಮಾಜಿಕ ಜಾಲತಾಣಗಳ ಐಟಿ ನಿಯಮಗಳ ಉಲ್ಲಂಘನೆ ಕುರಿತು ಬಳಕೆದಾರರು ಮಾಹಿತಿ ನೀಡಬಹುದಾಗಿದೆ ಎಂದು ಐಟಿ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳ ಪ್ರತಿನಿಧಿಗಳ ಜೊತೆಗಿನ ಸಭೆಯ ನಂತರ ಅವರು ಸುದ್ದಿಗಾರರ ಜೊತೆ ಮಾತನಾಡುತ್ತಾ ಮೇಲಿನ ಮಾಹಿತಿ ನೀಡಿದ್ದಾರೆ. “ಇಂದಿನಿಂದ ಐಟಿ ನಿಯಮಗಳ ಉಲ್ಲಂಘನೆಗಳಿಗೆ ಶೂನ್ಯ ಸಹಿಷ್ಣುತೆ ಇರಲಿದೆ,” ಎಂದು ಅವರು ಹೇಳಿದರು.
ನಿಯಮಗಳ ಉಲ್ಲಂಘನೆಗಾಗಿ ಸಾಮಾಜಿಕ ಜಾಲತಾಣಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗುವುದು, ನಿಯಮ ಉಲ್ಲಂಘಿಸಿದ ಕಂಟೆಂಟ್ ಮೂಲದ ಕುರಿತು ಮಾಹಿತಿ ನೀಡಿದಲ್ಲಿ ಸಂಬಂಧಿತ ಸಂಸ್ಥೆ ವಿರುದ್ಧವೂ ದೂರು ದಾಖಲಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಐಟಿ ನಿಯಮಗಳಿಗೆ ಅನುಸಾರವಾಗಿ ತಮ್ಮ ಬಳಕೆಯ ನಿಯಮಗಳನ್ನು ಸರಿಹೊಂದಿಸಲು ಸಾಮಾಜಿಕ ಜಾಲತಾಣಗಳಿಗೆ ಏಳು ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಅವರು ಹೇಳಿದರು.







