ದಿಲ್ಲಿ ಸಿಎಂ ರೇಖಾ ಗುಪ್ತಾರಿಗೆ ಒದಗಿಸಿದ್ದ ಸಿಆರ್ಪಿಎಫ್ ಭದ್ರತೆ ಹಿಂಪಡೆದ ಕೇಂದ್ರ ಸರಕಾರ

ದಿಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ (Photo: PTI)
ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾರ ಮೇಲೆ ಇತ್ತೀಚೆಗೆ ನಡೆದಿದ್ದ ಹಲ್ಲೆಯ ಹಿನ್ನೆಲೆಯಲ್ಲಿ ಅವರಿಗೆ ಒದಗಿಸಲಾಗಿದ್ದ ಝೆಡ್ ಶ್ರೇಣಿಯ ಸಿಆರ್ಪಿಎಫ್ ಭದ್ರತೆಯನ್ನು ಕೇಂದ್ರ ಸರಕಾರ ಹಿಂಪಡೆದಿದೆ ಎಂದು ವರದಿಯಾಗಿದೆ.
ರೇಖಾ ಗುಪ್ತಾರ ಭದ್ರತೆಯನ್ನು ಮರಳಿ ದಿಲ್ಲಿ ಪೊಲೀಸರ ಸುಪರ್ದಿಗೆ ವಹಿಸಲಾಗಿದೆ ಎಂದೂ ಅವು ಹೇಳಿವೆ.
ಆಗಸ್ಟ್ 20ರಂದು ಸಿವಿಲ್ ಲೈನ್ಸ್ ನಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ರೇಖಾ ಗುಪ್ತಾ 'ಜನ್ ಸುನ್ವಾಯಿ' ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾಗ, ಅಪರಿಚಿತ ವ್ಯಕ್ತಿಯೊಬ್ಬ ಅವರ ಮೇಲೆ ಹಲ್ಲೆ ನಡೆಸಿದ್ದ. ಈ ಹಲ್ಲೆಯನ್ನು ಮುಖ್ಯಮಂತ್ರಿ ರೇಖಾ ಗುಪ್ತಾರನ್ನು ಹತ್ಯೆಗೈಯ್ಯುವ ಪೂರ್ವನಿಯೋಜಿತ ಕೃತ್ಯ ಎಂದು ಅವರ ಕಚೇರಿ ಆರೋಪಿಸಿತ್ತು.
ಇದರ ಬೆನ್ನಿಗೇ, ಕೇಂದ್ರ ಸರಕಾರದ ಶಿಷ್ಟಾಚಾರದನ್ವಯ ದಿಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾರಿಗೆ ಝೆಡ್ ಶ್ರೇಣಿಯ ಭದ್ರತೆ ಒದಗಿಸುವಂತೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್ಪಿಎಫ್)ಯ ವಿಐಪಿ ಘಟಕಕ್ಕೆ ಕೇಂದ್ರ ಗೃಹ ಸಚಿವಾಲಯ ಸೂಚಿಸಿತ್ತು.





