ಕಕ್ಷೆ ಸೇರಿದ ‘ನಿಸಾರ್’ ಉಪಗ್ರಹ

Photo Credit: Videograb: X/@NASA
ಶ್ರೀಹರಿಕೋಟ, ಜು. 30: ಜಗತ್ತಿನ ಅತ್ಯಂತ ದುಬಾರಿಯ ನಾಗರಿಕ ಉದ್ದೇಶದ ಭೂವೀಕ್ಷಣೆ ಉಪಗ್ರಹ ‘ನಿಸಾರ್’ (ನಾಸಾ-ಇಸ್ರೋ ಸಿಂಥೆಟಿಕ್ ಅಪೆರ್ಚರ್ ರಾಡರ್ ಸೆಟಲೈಟ್)ಆಂಧ್ರಪ್ರದೇಶದ ಶ್ರೀಹರಿಕೋಟದ ಬಾಹ್ಯಾಕಾಶ ಕೇಂದ್ರದಿಂದ ಬುಧವಾರ ಆಕಾಶಕ್ಕೆ ನೆಗೆಯಿತು.
ಅನಂತರ ಅದನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಯಿತು.
ಭೂ ವೀಕ್ಷಣೆ ಉದ್ದೇಶದಿಂದ ಇಸ್ರೋ ಹಾಗೂ ಅಮೆರಿಕದ ನಾಸಾ ಜಂಟಿಯಾಗಿ ಅಭಿವೃದ್ಧಿಪಡಿಸಿದ ‘ನಿಸಾರ್’ ಉಪಗ್ರಹವನ್ನು ಹೊತ್ತ ಜಿಎಸ್ಎಲ್ವಿ-ಎಫ್-16 ರಾಕೆಟ್ ಬುಧವಾರ ಸಂಜೆ 5.40ಕ್ಕೆ ನಭಕ್ಕೆ ಚಿಮ್ಮಿತು.
ಇದು ಎರಡು ಬಾಹ್ಯಾಕಾಶ ಸಂಸ್ಥೆಗಳ ನಡುವಿನ ಮೊದಲ ಸಹಯೋಗ.
‘‘ನಾವು ನಿಸಾರ್ ಅನ್ನು ಹೊತ್ತ ಜಿಎಸ್ಎಲ್ವಿ-ಎಫ್-16 ರಾಕೆಟ್ ಅನ್ನು ಯಶಸ್ವಿಯಾಗಿ ಉಡಾಯಿಸಿದ್ದೇವೆ’’ ಎಂದು ಇಸ್ರೋ ತನ್ನ ‘ಎಕ್ಸ್’ನ ಪೋಸ್ಟ್ ನಲ್ಲಿ ಹೇಳಿದೆ.
ಈ ಉಪಗ್ರಹ ಉಡಾವಣೆಯಿಂದ ಭಾರತ, ಅಮೆರಿಕ ಸೇರಿದಂತೆ ಇಡೀ ಜಗತ್ತಿಗೆ ಪ್ರಯೋಜನವಾಗಲಿದೆ.
ಈ ಉಪಗ್ರಹ ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ನಿಗಾ ವಹಿಸಲು, ದಿನದ 24 ಗಂಟೆ ಭೂಮಿಯ ಚಿತ್ರ ತೆಗೆಯಲು, ಭೂಕುಸಿತ ಪತ್ತೆ, ಹವಾಮಾನ ಬದಲಾವಣೆ, ವಿಪತ್ತು ನಿರ್ವಹಣೆಗೆ ನೆರವಾಗಲಿದೆ ಎಂದು ಇಸ್ರೋ ತಿಳಿಸಿದೆ.







