ಸೆ.22ರಿಂದ ನೂತನ ಜಿಎಸ್ಟಿ ದರಗಳು ಜಾರಿ : ನೀವೇಕೆ ಉತ್ಪನ್ನಗಳ ಎಂಆರ್ಪಿಗಳನ್ನು ಎರಡೆರಡು ಬಾರಿ ಪರೀಕ್ಷಿಸಬೇಕು?

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಸೆ.19: ನೂತನ ಜಿಎಸ್ಟಿ ದರಗಳು ಸೆ.22ರಿಂದ ದೇಶಾದ್ಯಂತ ಜಾರಿಗೊಳ್ಳಲಿವೆ. ಗ್ರಾಹಕರಿಗೆ ಇದು ಒಳ್ಳೆಯ ಸುದ್ದಿಯಾಗಿದ್ದರೂ ಪ್ಯಾಕ್ ಮಾಡಲಾದ ವಸ್ತುಗಳನ್ನು ಖರೀದಿಸುವಾಗ ಅವರು ಹೆಚ್ಚಿನ ಜಾಗ್ರತೆಯನ್ನು ವಹಿಸಬೇಕಿದೆ.
ಕಂಪೆನಿಗಳು ಬದಲಾವಣೆಗಳನ್ನು ಜಾರಿಗೆ ತರುವುದನ್ನು ಸುಲಭಗೊಳಿಸಲು ಗ್ರಾಹಕ ವ್ಯವಹಾರಗಳ ಇಲಾಖೆಯು ಪರಿಷ್ಕೃತ ಸಲಹಾ ಸೂಚಿಯನ್ನು ಹೊರಡಿಸಿದೆ. ಆದರೆ ವ್ಯವಸ್ಥೆಯು ಸ್ಥಳೀಯ ಅಂಗಡಿಗಳಲ್ಲಿ ಕೆಲವು ಗೊಂದಲಗಳನ್ನುಂಟುಮಾಡಬಹುದು.
ನೂತನ ನಿಯಮಗಳಡಿ ತಯಾರಕರು, ಪ್ಯಾಕರ್ಗಳು ಮತ್ತು ಆಮದುದಾರರು ಸೆ.22ಕ್ಕೆ ಮೊದಲು ತಯಾರಾದ ಉತ್ಪನ್ನಗಳ ಮೇಲೆ ಹೊಸ ಬೆಲೆಗಳ ಲೇಬಲ್ಗಳನ್ನು ಅಂಟಿಸಬಹುದು ಮತ್ತು ಆಗಲೂ ಹಳೆಯ ಗರಿಷ್ಠ ಮಾರಾಟ ಬೆಲೆಯು(ಎಂಆರ್ಪಿ) ಗೋಚರಿಸುತ್ತದೆ. ಇದು ಕೆಲವು ಉತ್ಪನ್ನಗಳು ಮೂಲದರ ಮತ್ತು ಪರಿಷ್ಕೃತ ಜಿಎಸ್ಟಿ ದರ, ಹೀಗೆ ಎರಡು ಎಂಆರ್ಪಿಗಳನ್ನು ತೋರಿಸಲು ಕಾರಣವಾಗಬಹುದು.
ಉದಾಹರಣೆಗೆ ಮೊದಲು 50 ರೂ.ಎಂಆರ್ಪಿ ಹೊಂದಿದ್ದ ಬಿಸ್ಕಿಟ್ ಪ್ಯಾಕ್ ಈಗ ಹೊಸ ಜಿಎಸ್ಟಿಯನ್ನು ಪ್ರತಿಬಿಂಬಿಸುವ 48 ರೂ.ಗಳ ಪರಿಷ್ಕೃತ ಎಂಆರ್ಪಿಯನ್ನು ತೋರಿಸಬಹುದು. ಬದಲಾವಣೆಯ ಬಗ್ಗೆ ತಿಳಿದಿರದ ಅಂಗಡಿಕಾರ ಈಗಲೂ ನಿಮ್ಮಿಂದ 50 ರೂ.ಗಳನ್ನು ಪಡೆದುಕೊಳ್ಳಬಹುದು ಮತ್ತು ನೀವು ಪಾವತಿಸಬೇಕಾದ್ದಕ್ಕಿಂತ ಹೆಚ್ಚು ಹಣ ನೀಡಬಹುದು.
ಈ ಹಿಂದೆ ಪರಿಷ್ಕೃತ ಎಂಆರ್ಪಿಗಳ ಬಗ್ಗೆ ಎರಡು ವೃತ್ತಪತ್ರಿಕೆಗಳಲ್ಲಿ ಜಾಹೀರಾತು ನೀಡುವಂತೆ ಕಂಪೆನಿಗಳಿಗೆ ಸೂಚಿಸಲಾಗಿತ್ತು. ಇದನ್ನು ಈಗ ಮನ್ನಾ ಮಾಡಲಾಗಿದೆ. ಬದಲಿಗೆ ಅವು ಪರಿಷ್ಕೃತ ಬೆಲೆ ಪಟ್ಟಿಗಳನ್ನು ಡೀಲರ್ಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ವಿತರಿಸಿದರೆ ಸಾಕು ಹಾಗೂ ಪ್ರತಿಗಳನ್ನು ಕಾನೂನು ಮಾಪನಶಾಸ್ತ್ರ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಬೇಕು.
ಹಳೆಯ ಪ್ಯಾಕೇಜಿಂಗ್ ಅನ್ನು ಮಾ.31,2026ರವರೆಗೆ ಅಥವಾ ದಾಸ್ತಾನು ಖಾಲಿಯಾಗುವ ತನಕ ಬಳಸಿಕೊಳ್ಳಬಹುದು. ಹಳೆಯ ಪ್ಯಾಕೇಜಿಂಗ್ ಮೇಲಿನ ಎಂಆರ್ಪಿಗಳನ್ನು ಸ್ಟಿಕರ್ಗಳು, ಸ್ಟ್ಯಾಂಪ್ಗಳು ಅಥವಾ ಡಿಜಿಟಲ್ ಮುದ್ರಣವನ್ನು ಸಹ ಬಳಸಿಕೊಂಡು ತಿದ್ದುಪಡಿ ಮಾಡಬಹುದು.
ಗ್ರಾಂಟ್ ಥಾರ್ನಟನ್ ಭಾರತದ ಪಾಲುದಾರ ಮನೋಜ ಮಿಶ್ರಾರ ಪ್ರಕಾರ, ಸರಕಾರದ ಸ್ಪಷ್ಟೀಕರಣವು ಗ್ರಾಹಕರಿಗೆ ಪಾರದರ್ಶಕತೆಯನ್ನು ಖಚಿತಪಡಿಸುವ ಜೊತೆಗೆ ವ್ಯವಹಾರಗಳ ಅನುಸರಣೆ ಹೊರೆಯನ್ನು ಕಡಿಮೆ ಮಾಡುತ್ತದೆ. ಆದರೆ ಖರೀದಿದಾರರು ತಮಗೆ ಜಿಎಸ್ಟಿ ಕಡಿತದ ಲಾಭ ದೊರೆಯುವುದನ್ನು ಖಚಿತಪಡಿಸಿಕೊಳ್ಳಲು ಎಂಆರ್ಪಿಗಳನ್ನು ಎರಡೆರಡು ಬಾರಿ ಪರಿಶೀಲಿಸುವುದು ಅಗತ್ಯವಾಗುತ್ತದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ ಹೊಸ ಜಿಎಸ್ಟಿ ದರಗಳು ಕಡಿಮೆ ತೆರಿಗೆಗಳನ್ನು ಸೂಚಿಸುತ್ತವೆ. ಆದರೆ ಖರೀದಿದಾರರು ಜಾಗರೂಕರಾಗಿರಬೇಕು. ವಿಶೇಷವಾಗಿ ಇನ್ನೂ ಹಳೆಯ ದರಗಳನ್ನೇ ವಿಧಿಸಬಹುದಾದ ಸಣ್ಣ ಅಂಗಡಿಗಳಲ್ಲಿ ಹಣವನ್ನು ಪಾವತಿಸುವ ಮುನ್ನ ಯಾವಾಗಲೂ ಪ್ಯಾಕೇಜ್ ಮೇಲಿನ ಎಂಆರ್ಪಿಯನ್ನು ಪರಿಶೀಲಿಸಬೇಕು. ಜಾಗರೂಕರಾಗಿರುವುದು ಜಿಎಸ್ಟಿ ಕಡಿತದ ಲಾಭವು ಗ್ರಾಹಕರ ಜೇಬನ್ನು ಸೇರುತ್ತದೆ ಎನ್ನುವುದನ್ನು ಖಚಿತಪಡಿಸುತ್ತದೆ.







