ʼGST Bachat Utsav ’ದ ಪ್ರಚಾರಕ್ಕಾಗಿ ಕೇಂದ್ರದಿಂದ 4.76 ಕೋಟಿ ರೂ.ವೆಚ್ಚ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಜ.5: GST Bachat Utsav(ಜಿಎಸ್ಟಿ ಉಳಿತಾಯ ಹಬ್ಬ)’ದ ಪ್ರಚಾರಕ್ಕಾಗಿ ಕೇಂದ್ರ ಸರಕಾರವು ಕೇವಲ 55 ದಿನಗಳಲ್ಲಿ 4.76 ಕೋಟಿ ರೂ.ಗೂ ಹೆಚ್ಚು ಹಣವನ್ನು ವೆಚ್ಚ ಮಾಡಿದೆ.
ಮಹಾರಾಷ್ಟ್ರದ ಅಮರಾವತಿ ನಿವಾಸಿ ಅಜಯ್ ಬಸುದೇವ್ ಬೋಸ್ ಅವರು ಆರ್ಟಿಐ ಕಾಯ್ದೆಯಡಿ ಪಡೆದ ಮಾಹಿತಿಯ ಪ್ರಕಾರ ಮುದ್ರಣ ಮಾಧ್ಯಮದಲ್ಲಿ ಜಾಹೀರಾತುಗಳಿಗಾಗಿಯೇ ಈ ಹಣವನ್ನು ಖರ್ಚು ಮಾಡಲಾಗಿದೆ.
ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧೀನದ ಸೆಂಟ್ರಲ್ ಬ್ಯೂರೋ ಆಫ್ ಕಮ್ಯುನಿಕೇಷನ್ (ಸಿಬಿಸಿ) ನೀಡಿರುವ ಆರ್ಟಿಐ ಉತ್ತರದ ಪ್ರಕಾರ, ಸರಕಾರವು ಸೆ.4,2025 ಮತ್ತು ಅ.28,2025ರ ನಡುವೆ ‘ಬಚತ್ ಉತ್ಸವ’ದಡಿ ‘ಜಿಎಸ್ಟಿ ಸುಧಾರಣೆಗಳ’ ಪ್ರಚಾರ ಜಾಹೀರಾತುಗಳಿಗಾಗಿ 4,76,12,276 ರೂ.ಗಳನ್ನು ವೆಚ್ಚ ಮಾಡಿದೆ.
ಈ ವೆಚ್ಚವು ಸಿಬಿಸಿ ಕೇಂದ್ರ ಸರಕಾರದ ಪರವಾಗಿ ಮುದ್ರಣ ಮಾಧ್ಯಮಗಳಲ್ಲಿ ಬಿಡುಗಡೆ ಮಾಡಿದ ಜಾಹೀರಾತುಗಳಿಗೆ ಮಾತ್ರ ಸಂಬಂಧಿಸಿದೆ ಎಂದು ಆರ್ಟಿಐ ಉತ್ತರದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಮುದ್ರಣ, ವಿದ್ಯುನ್ಮಾನ, ಸಾಮಾಜಿಕ ಮಾಧ್ಯಮಗಳು, ಹೋರ್ಡಿಂಗ್ ಗಳು ಮತ್ತು ಜಾಹೀರಾತು ಫಲಕಗಳ ಮೂಲಕ ಜಿಎಸ್ಟಿ ಸುಧಾರಣೆಗಳ ಪ್ರಚಾರಕ್ಕಾಗಿ ಮಾಡಿದ ಒಟ್ಟು ವೆಚ್ಚಗಳ ವಿವರಗಳನ್ನು ಆರ್ಟಿಐ ಅರ್ಜಿಯು ಕೋರಿತ್ತಾದರೂ ಉತ್ತರದಲ್ಲಿ ಮುದ್ರಣ ಮಾಧ್ಯಮದ ಅಂಕಿಅಂಶಗಳನ್ನು ಮಾತ್ರ ಬಹಿರಂಗಗೊಳಿಸಲಾಗಿದೆ.
ವಿದ್ಯುನ್ಮಾನ ಮಾಧ್ಯಮ, ಸಾಮಾಜಿಕ ಮಾಧ್ಯಮ ಮತ್ತು ಹೊರಾಂಗಣ ಜಾಹೀರಾತುಗಳಿಗಾಗಿ ಮಾಡಿರುವ ವೆಚ್ಚಗಳನ್ನು ಸೇರಿಸಿದರೆ ಒಟ್ಟು ಖರ್ಚಿನ ಮೊತ್ತವು ಗಣನೀಯವಾಗಿ ಹೆಚ್ಚುತ್ತದೆ ಎನ್ನುವುದನ್ನು ಇದು ಸೂಚಿಸಿದೆ.
ಮುಂದಿನ ಪೀಳಿಗೆಯ ಜಿಎಸ್ಟಿ ಸುಧಾರಣೆಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಲು ಮೋದಿ ಸರಕಾರವು ’ಜಿಎಸ್ಟಿ ಬಚತ್ ಉತ್ಸವ’ ಹೆಸರಿನಲ್ಲಿ ರಾಷ್ಟ್ರವ್ಯಾಪಿ ಪ್ರಚಾರ ಅಭಿಯಾನವನ್ನು ಹಮ್ಮಿಕೊಂಡಿತ್ತು. ಈ ಸುಧಾರಣೆಗಳ ಮೂಲಕ ದೈನಂದಿನ ಅಗತ್ಯದ ಹಲವಾರು ವಸ್ತುಗಳನ್ನು ತೆರಿಗೆ ಮುಕ್ತಗೊಳಿಸಲಾಗಿದೆ ಅಥವಾ ಅವುಗಳನ್ನು ಕನಿಷ್ಠ ಶೇ.5ರ ತೆರಿಗೆ ವ್ಯಾಪ್ತಿಗೆ ತರಲಾಗಿದೆ ಎಂದು ಸರಕಾರವು ಹೇಳಿತ್ತು.







