ಜೈಪುರ | ಜೈನದೇಗುಲದಲ್ಲಿ ಹುಲಿ ದಾಳಿಗೆ ಮತ್ತೋರ್ವ ಮೃತ್ಯು

ಸಾಂದರ್ಭಿಕ ಚಿತ್ರ
ಜೈಪುರ: ಇಲ್ಲಿನ ರಣತಾಂಬೋರ್ ಕೋಟೆಯ ಒಳಗಿರುವ ಜೈನ ದೇಗುಲದಲ್ಲಿ ಕಾವಲು ಕಾಯುತ್ತಿದ್ದ 70 ವರ್ಷದ ವೃದ್ಧ ಸೋಮವಾರ ಹುಲಿ ದಾಳಿಯಿಂದ ಮೃತಪಟ್ಟಿದ್ದು, ಜನಪ್ರಿಯ ಹುಲಿ ರಕ್ಷಿತಾರಣ್ಯದಲ್ಲಿ ಕಳೆದ ಎರಡು ತಿಂಗಳಲ್ಲಿ ಸಂಭವಿಸಿದ ಮೂರನೇ ಜೀವಹಾನಿ ಇದಾಗಿದೆ.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಈ ಘಟನೆಗೆ ತುರ್ತಾಗಿ ಸ್ಪಂದಿಸಿದ್ದು, ಮನುಷ್ಯರ ಮೇಲೆ ಸರಣಿ ದಾಳಿ ನಡೆಸುತ್ತಿದೆ ಎನ್ನಲಾದ ಟಿ-84 ಎಂಬ ಹೆಣ್ಣುಹುಲಿಯ ಮರಿಗಳನ್ನು ತುರ್ತಾಗಿ ಸ್ಥಳಾಂತರಿಸುವ ಸಂಬಂಧ ಬಾಕಿ ಇರುವ ಪ್ರಸ್ತಾವನೆಗೆ ಅನುಮೋದನೆ ನೀಡಿದೆ.
ಮೃತ ವ್ಯಕ್ತಿಯನ್ನು ಶೇರ್ಪುರ ಗ್ರಾಮದ ರಾಧೇಶ್ಯಾಂ ಮಾಲಿ ಎಂದು ಗುರುತಿಸಲಾಗಿದೆ. ಮುಂಜಾನೆ 4.30ರ ಸುಮಾರಿಗೆ ಕರ್ತವ್ಯ ಮುಗಿಸಿ ಹೊರಬಂದ ವ್ಯಕ್ತಿಯ ಮೇಲೆ ದಿಢೀರನೇ ದಾಳಿ ನಡೆಸಿದ ಹುಲಿ ಆತನನ್ನು ಎಳೆದುಕೊಂಡು ಹೋಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಾಲಿ ಅವರ ಸಂಬಂಧಿಕರು ಕೋಟೆ ಪ್ರದೇಶದಲ್ಲಿರುವ ಅರಣ್ಯ ಇಲಾಖೆಯ ಮುಂದೆ ಪ್ರತಿಭಟನೆ ನಡೆಸಿ 50 ಲಕ್ಷ ರೂ. ಪರಿಹಾರಕ್ಕೆ ಆಗ್ರಹಿಸಿದರು. ಜತೆಗೆ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ನೀಡುವಂತೆ ಮತ್ತು 10 ಬಿಘಾ ಭೂಮಿ ನೀಡುವಂತೆಯೂ ಒತ್ತಾಯಿಸಿದರು. ಪ್ರತಿಭಟನಾಕಾರರು ಮತ್ತು ಅಧಿಕಾರಿಗಳ ನಡುವಿನ ಸಂಧಾನ ಮಾತುಕತೆ ರಾತ್ರಿಯವರೆಗೂ ಮುಂದುವರಿದಿತ್ತು.
ಕಳದ ತಿಂಗಳು ಈ ಹೆಣ್ಣುಹುಲಿಯ ಮರಿ ಕಾಂಕತಿ ಏಳು ವರ್ಷದ ಬಾಲಕನ ಮೇಲೆ ದಾಳಿ ನಡೆಸಿತ್ತು. ಒಂದು ವಾರದ ಬಳಿಕ 40 ವರ್ಷದ ಅರಣ್ಯ ರಕ್ಷಕ ಹುಲಿದಾಳಿಗೆ ಬಲಿಯಾಗಿದ್ದ.