ಡಿಜಿಟಲ್ ಉಪಕರಣಗಳ ಶೋಧ, ಮುಟ್ಟುಗೋಲಿಗೆ ಮಾರ್ಗದರ್ಶಿ ಸೂತ್ರ : ಕೇಂದ್ರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ
ಸುಪ್ರೀಂಕೋರ್ಟ್ | Photo: PTI
ಹೊಸದಿಲ್ಲಿ: ಡಿಜಿಟಲ್ ಉಪಕರಣಗಳ ಶೋಧ ಹಾಗೂ ಮುಟ್ಟುಗೋಲು ಕಾರ್ಯಾಚರಣೆಗಳಿಗೆ ಸಂಬಂಧಿಸಿ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ (ಈಡಿ)ದಂತಹ ಏಜೆನ್ಸಿಗಳಿಗೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ವಿಚಾರಣೆಗೆ ಸ್ವೀಕರಿಸಿದ ಸುಪ್ರೀಂಕೋರ್ಟ್ ಶುಕ್ರವಾರ ಈ ಬಗ್ಗೆ ಕೇಂದ್ರ ಸರಕಾರದ ಪ್ರತಿಕ್ರಿಯೆಯನ್ನು ಕೇಳಿದೆ.
ಸುದ್ದಿಜಾಲತಾಣ ‘ನ್ಯೂಸ್ಕ್ಲಿಕ್’ ಹಾಗೂ ಅದರ ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥ ಅವರು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಹಾಗೂ ಸಂದೀಪ್ ಮೆಹ್ತಾ ಅವರನ್ನೊಳಗೊಂಡ ನ್ಯಾಯಪೀಠ ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಇಂತಹದೇ ವಿಷಯಗಳಿಗೆ ಸಂಬಂಧಿಸಿದಂತೆ ವಿಚಾರಣೆಗೆ ಬಾಕಿಯಿರುವ ಅರ್ಜಿಗಳ ಜೊತೆ ಈ ವಿಷಯದ ಆಲಿಕೆಯನ್ನು ನಡೆಸಲಾಗುವುದು ಎಂದು ನ್ಯಾಯಪೀಠ ತಿಳಿಸಿದೆ. ತಮ್ಮ ಹಕ್ಕುಗಳ ಅನುಷ್ಠಾನವನ್ನು ಖಾತರಿಪಡಿಸಲು ಸುಪ್ರೀಂಕೋರ್ಟ್ ಮೆಟ್ಟಲೇರಲು ಸಂವಿಧಾನದ 32ನೇ ವಿಧಿಯನ್ನು ಬಳಸಿಕೊಳ್ಳುವುದನ್ನು ತಾನು ಪ್ರಶಂಸಿಸುವುದಿಲ್ಲವೆಂದು ಅದು ತಿಳಿಸಿತು.
ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ಇಂತಹದೇ ವಿಷಯಗಳನ್ನು ಪ್ರಸ್ತಾವಿಸಿರುವ ಅರ್ಜಿಗಳನ್ನು ನ್ಯಾಯಾಲಯವು ಪುರಸ್ಕರಿಸಿರುವುದರಿಂದ ತಾವು ಕೂಡಾ ಸರ್ವೋಚ್ಚ ನ್ಯಾಯಾಲಯದ ಮೆಟ್ಟಲೇರಿರುವುದಾಗಿ ತಿಳಿಸಿದರು.
ಸಿಬಿಐ, ಈ.ಡಿ. ಮತ್ತಿತರು ಕಾನೂನು ಜಾರಿ ಸಂಸ್ಥೆಗಳು ಡಿಜಿಟಲ್ ಸಾಮಾಗ್ರಿಗಳನ್ನು ಮುಟ್ಟುಗೋಲು ಹಾಕುವುದಕ್ಕೆ ಸಂಬಂಧಿಸಿ ಕೇಂದ್ರ ಸರಕಾರವು ಮಾರ್ಗದರ್ಶಿ ಸೂತ್ರವನ್ನು ರೂಪಿಸಬೇಕೆಂದು ಅವರು ಮನವಿ ಮಾಡಿದರು.
ಕಪಿಲ್ ಅವರ ವಾದವನ್ನು ಪುರಸ್ಕರಿಸಿದ ನ್ಯಾಯಪೀಠವು ಕೇಂದ್ರ ಸರಕಾರ, ಸಿಬಿಐ, ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ , ದಿಲ್ಲಿ ಪೊಲೀಸರು ಮತ್ತಿತರಿಂದ ಪ್ರತಿಕ್ರಿಯೆ ಕೋರಿ ನ್ಯಾಯಪೀಠವು ಈ ಬಗ್ಗೆ ನೋಟಿಸ್ ಜಾರಿಗೊಳಿಸಿದೆ.