ಗುಜರಾತ್ | ಸಮಾನ ನಾಗರಿಕ ಸಂಹಿತೆ ಸಿದ್ಧಪಡಿಸಲು 5 ಸದಸ್ಯರ ಸಮಿತಿ ರಚನೆ

ರಂಜನಾ ದೇಸಾಯಿ | PC : PTI
ಗಾಂಧಿನಗರ : ಸಮಾನ ನಾಗರಿಕ ಸಂಹಿತೆ (ಯುಸಿಸಿ)ಯ ಕರಡು ನಿಯಮಾವಳಿಗಳನ್ನು ರೂಪಿಸಲು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶೆ ರಂಜನಾ ದೇಸಾಯಿ ನೇತೃತ್ವದಲ್ಲಿ ಐವರು ಸದಸ್ಯರ ಸಮಿತಿಯೊಂದನ್ನು ರಚಿಸಿರುವುದಾಗಿ ಗುಜರಾತ್ ಸರಕಾರ ಮಂಗಳವಾರ ಪ್ರಕಟಿಸಿದೆ.
‘‘ಸಮಾನ ನಾಗರಿಕ ಸಂಹಿತೆಗಾಗಿ ಕರಡು ನಿಯಮಾವಳಿಗಳನ್ನು ರೂಪಿಸಲು ಮತ್ತು ಕಾನೂನು ರಚಿಸಲು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶೆ ರಂಜನಾ ದೇಸಾಯಿ ಅಧ್ಯಕ್ಷತೆಯಲ್ಲಿ ಐವರು ಸದಸ್ಯರ ಸಮಿತಿಯೊಂದನ್ನು ರಚಿಸಲಾಗಿದೆ. ಸಮಿತಿಯು ರಾಜ್ಯ ಸರಕಾರಕ್ಕೆ 45 ದಿನಗಳಲ್ಲಿ ತನ್ನ ವರದಿ ಸಲ್ಲಿಸುವುದು. ಅದರ ಆಧಾರದಲ್ಲಿ ಸರಕಾರವು ನಿರ್ಧಾರವೊಂದನ್ನು ತೆಗೆದುಕೊಳ್ಳಲಿದೆ’’ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹೇಳಿದರು.
‘‘ಮೋದೀಜಿಯ ನಾಯಕತ್ವದಲ್ಲಿ ನಾವು ಈ ವರ್ಷ ಸಂವಿಧಾನದ 75 ವರ್ಷಗಳನ್ನು ಆಚರಿಸುತ್ತಿದ್ದೇವೆ. ಎಲ್ಲರಿಗೂ ಸಮಾನ ಹಕ್ಕುಗಳು ಸಿಗುವಂತೆ ದೇಶಾದ್ಯಂತ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದು ಅವರ ಗುರಿಯಾಗಿದೆ’’ ಎಂದು ಪಟೇಲ್ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.
‘‘ಮೋದೀಜಿಯ ಸಂಕಲ್ಪವನ್ನು ಈಡೇರಿಸುವ ನಿಟ್ಟಿನಲ್ಲಿ ಗುಜರಾತ್ ನಿರಂತರವಾಗಿ ಕೆಲಸ ಮಾಡುತ್ತಿದೆ. ಎಲ್ಲರಿಗೂ ಸಮಾನ ಹಕ್ಕುಗಳು ಮತ್ತು ಅವಕಾಶಗಳನ್ನು ಸೃಷ್ಟಿಸಲು ಸರಕಾರ ಮುಂದಾಗಿದೆ’’ ಎಂದು ಗುಜರಾತ್ ಮುಖ್ಯಮಂತ್ರಿ ಹೇಳಿದರು.