ಗುಜರಾತ್: ಮಳೆ ಸಂಬಂಧಿ ದುರ್ಘಟನೆಗಳಲ್ಲಿ 14 ಮಂದಿ ಸಾವು

PC : PTI
ಅಹ್ಮದಾಬಾದ್: ಗುಜರಾತ್ ನಲ್ಲಿ ಮಳೆ ಸಂಬಂಧಿ ದುರ್ಘಟನೆಗಳಲ್ಲಿ ಕನಿಷ್ಠ 14 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಗುಜರಾತಿನ ಹಲವು ಭಾಗಗಳಲ್ಲಿ ತೀವ್ರವಾದ ಬಿರುಗಾಳಿಯೊಂದಿಗೆ ಗುಡುಗು ಸಹಿತ ಮಳೆ ಹಾಗೂ ಧೂಳಿನ ಬಿರುಗಾಳಿ ಬೀಸಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಮುಂದಿನ ಕೆಲವು ದಿನಗಳಲ್ಲಿ ಗುಡುಗು ಸಿಡಿಲು ಸಹಿತ ಮಳೆ, ಗಂಟೆಗೆ 50ರಿಂದ 60 ಕಿ.ಮೀ. ವೇಗದ ಬಲವಾದ ಗಾಳಿ ಬೀಸಲಿದೆ ಎಂದು ಭಾರತದ ಹವಾಮಾನ ಇಲಾಖೆ (ಐಎಂಡಿ) ಮನ್ಸೂಚನೆ ನೀಡಿದೆ.
ರಾಜ್ಯದ 253 ತಾಲೂಕುಗಳ ಪೈಕಿ 168ಕ್ಕೂ ಅಧಿಕ ತಾಲೂಕುಗಳು ಕಳೆದ 24 ಗಂಟೆ ಅಕಾಲಿಕ ಮಳೆ ಸ್ವೀಕರಿಸಿವೆ. ಖೇಡಾ, ಗಾಂಧಿನಗರ, ಮೆಹ್ಸಾನ ಹಾಗೂ ವಡೋದರಾ ಜಿಲ್ಲೆಗಳು 25ರಿಂದ 40 ಮಿ.ಮೀ. ಮಳೆ ಪಡೆದಿವೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (ಎಸ್ಇಒಸಿ) ತಿಳಿಸಿದೆ.
ತೀವ್ರವಾದ ಗಾಳಿಯಿಂದಾಗಿ ಹಲವು ಜಿಲ್ಲೆಗಳಲ್ಲಿ ಮರಗಳು, ಹೋರ್ಡಿಂಗ್, ಕಂಬಗಳು ಧರೆಗುರುಳಿವೆ ಹಾಗೂ ಮನೆಗಳು ಕುಸಿದಿವೆ. ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಜರಾತ್ನ ಅಹ್ಮದಾಬಾದ್, ಆನಂದ್, ಖೇಡಾ, ದಾಹೋದ್ ಹಾಗೂ ವಡೋದರಾ ಜಿಲ್ಲೆಗಳಲ್ಲಿ ಸೋಮವಾರ ಸಿಡಿಲು, ವಿದ್ಯುತ್ ಆಘಾತ ಹಾಗೂ ಮರ, ಹೋರ್ಡಿಂಗ್ಗಳು ಧರೆಗುಳುಳಿದಂತಹ ಮಳೆ ಸಂಬಂಧಿ ದುರ್ಘಟನೆಗಳಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ.
ಅಹ್ಮದಾಬಾದ್ ನ ವಿರಾಮ್ ಗಾಮ್ ನಲ್ಲಿ ರವಿವಾರ ಸಿಡಿಲು ಬಡಿದು ಓರ್ವ ಮೃತಪಟ್ಟಿದ್ದಾನೆ ಎಂದು ಎಸ್ಇಒಸಿ ತಿಳಿಸಿದೆ.
ಜಿಲ್ಲೆಗಳಾದ ಖೇಡಾದಲ್ಲಿ ನಾಲ್ವರು, ವಡೋದರಾದಲ್ಲಿ ಮೂವರು, ಅಹ್ಮದಾಬಾದ್, ದಾಹೋದ್ ಹಾಗೂ ಅರಾವಲಿಯಲ್ಲಿ ತಲಾ ಇಬ್ಬರು ಹಾಗೂ ಆನಂದ್ನಲ್ಲಿ ಒಬ್ಬರು ಮೃತಪಟ್ಟಿರುವುದಾಗಿ ವರದಿಯಾಗಿದೆ ಎಂದು ಅದು ತಿಳಿಸಿದೆ.







