ಗುಜರಾತ್: ಸಹಪಾಠಿಗೆ ಇರಿದ 8ನೇ ತರಗತಿ ಬಾಲಕ

ಸಾಂದರ್ಭಿಕ ಚಿತ್ರ
ಬಾಲಾಸಿನೋರ್, ಆ. 22: ಗುಜರಾತ್ನ ಮಹಿಸಾಗರ್ ಜಿಲ್ಲೆಯ ಶಾಲೆಯೊಂದರ ಹೊರಗೆ ಅದೇ ಶಾಲೆಯ 8ನೇ ತರಗತಿ ವಿದ್ಯಾರ್ಥಿ ತನ್ನ ಸಹಪಾಠಿಗೆ ಇರಿದು ಗಾಯಗೊಳಿಸಿದ ಘಟನೆ ನಡೆದಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಅಹ್ಮದಾಬಾದ್ ನ ಖಾಸಗಿ ಶಾಲೆಯೊಂದರ ಹೊರಗೆ ಇದೇ ರೀತಿ 10ನೇ ತರಗತಿ ವಿದ್ಯಾರ್ಥಿಯನ್ನು ಕಿರಿಯ ವಿದ್ಯಾರ್ಥಿ ಇರಿದು ಹತ್ಯೆಗೈದ ಘಟನೆ ನಡೆದ ದಿನಗಳ ಬಳಿಕ ಈ ಘಟನೆ ಸಂಭವಿಸಿದೆ.
ಬಾಲಾಸಿನೋರ್ ಪಟ್ಟಣದ ಸರಕಾರಿ ಪ್ರಾಥಮಿಕ ಶಾಲೆಯ ಗೇಟ್ ಬಳಿ ಅದೇ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಶಾಲಾ ಅವಧಿ ಮುಗಿದ ಬಳಿಕ ತನ್ನ ಸಹಪಾಠಿ ಮೇಲೆ ಹರಿತವಾದ ವಸ್ತುವಿನಿಂದ ದಾಳಿ ನಡೆಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘‘ಸಂತ್ರಸ್ತ ವಿದ್ಯಾರ್ಥಿಯ ತಂದೆ ನೀಡಿದ ದೂರಿನ ಆಧಾರದಲ್ಲಿ ಆರೋಪಿ ಬಾಲಕನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ’’ ಎಂದು ಪೊಲೀಸ್ ಅಧೀಕ್ಷಕ ಜಯದೀಪ್ ಸಿನ್ಹಾ ಜಡೇಜಾ ತಿಳಿಸಿದ್ದಾರೆ.
ಸಂತ್ರಸ್ತ ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ. ಆತನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅವರು ತಿಳಿಸಿದ್ದಾರೆ.
‘‘ಕ್ಷುಲ್ಲಕ ಕಾರಣಕ್ಕೆ ನನ್ನ ಪುತ್ರನ ಬಗ್ಗೆ ಆತನ ಸಹಪಾಠಿ ಆಕ್ರೋಶಗೊಂಡಿದ್ದಾನೆ ಹಾಗೂ ಸಣ್ಣ ಚಾಕುವಿನಿಂದ ಇರಿದಿದ್ದಾನೆ. ನನ್ನ ಪುತ್ರನ ಬೆನ್ನು, ಹೊಟ್ಟೆ ಹಾಗೂ ಭುಜದ ಸಮೀಪ ಗಾಯಗಳಾಗಿವೆ’’ ಎಂದು ಸಂತ್ರಸ್ತ ಬಾಲಕನ ತಂದೆ ಹೇಳಿದ್ದಾರೆ.







