ಗುಜರಾತ್ | ಮನೆಯಲ್ಲಿ ಅಗ್ನಿ ದುರಂತ; ಒಂದೇ ಕುಟುಂಬದ ನಾಲ್ವರು ಉಸಿರುಗಟ್ಟಿ ಮೃತ್ಯು

Photo Credit : @drmanishdoshi
ಗೋಧ್ರಾ, ನ. 21: ಗುಜರಾತ್ ನ ಗೋಧ್ರಾ ಪಟ್ಟಣದಲ್ಲಿರುವ ಮನೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಒಂದೇ ಕುಟುಂಬದ ನಾಲ್ವರು ಸದಸ್ಯರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಈ ದುರ್ಘಟನೆ ಗಂಗೋತ್ರಿ ನಗರದಲ್ಲಿ ಗುರುವಾರ ತಡ ರಾತ್ರಿ ಸಂಭವಿಸಿದೆ.
ಮೃತರನ್ನು ಆಭರಣ ವ್ಯಾಪಾರಿ ಕಮಲ್ ದೋಶಿ (50), ಪತ್ನಿ ದವಳ್ ಬೆನ್ (45) ಹಾಗೂ ಅವರ ಪುತ್ರರಾದ ದೇವ್ (24) ಹಾಗೂ ರಾಜ್ (22) ಎಂದು ಗುರುತಿಸಲಾಗಿದೆ. ಅವರು ಮಲಗಿದ್ದಾಗ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ವಿಭಾಗೀಯ ಪೊಲೀಸ್ ಠಾಣೆಯ ಅಧಿಕಾರಿ ಆರ್.ಎಂ. ವಸೆಯ್ಯಾ ತಿಳಿಸಿದ್ದಾರೆ.
ದೋಶಿ ಕುಟುಂಬ ತಮ್ಮ ಓರ್ವ ಪುತ್ರನ ನಿಶ್ಚಿತಾರ್ಥದ ಹಿನ್ನೆಲೆಯಲ್ಲಿ ಸಿದ್ಧತೆ ನಡೆಸುತ್ತಿತ್ತು. ಅಲ್ಲದೆ, ಅವರು ಶುಕ್ರವಾರ ಬೆಳಗ್ಗೆ ವಾಪಿಗೆ ತೆರಳಬೇಕಿತ್ತು.
‘‘ಮೇಲ್ನೋಟಕ್ಕೆ ನೆಲ ಮಹಡಿಯ ಏರ್ ಕಂಡಿಶನ್ ನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ ನಿಂದ ಮನೆಯಲ್ಲಿರುವ ಮರದ ಪೀಠೋಪಕರಣಗಳಿಗೆ ಬೆಂಕಿ ಹತ್ತಿಕೊಂಡಿರುವುದು ಕಂಡು ಬಂದಿದೆ. ಇದರಿಂದ ಉಸಿರುಗಟ್ಟಿ ನಾಲ್ವರು ಸಾವನ್ನಪ್ಪಿದ್ದಾರೆ’’ ಎಂದು ವೆಸೆಯ್ಯಾ ಅವರು ತಿಳಿಸಿದ್ದಾರೆ.





