ಗುಜರಾತ್| ಜಾತಿ ತಾರತಮ್ಯ, ನಿರೋದ್ಯೋಗದ ಕುರಿತು ಬುಡಕಟ್ಟು ಯುವಕರಿಂದ 131 ಕಿ.ಮೀ. ಪಾದಯಾತ್ರೆ

Photo Credit : newindianexpress.com
ಅಹ್ಮದಾಬಾದ್, ಡಿ. 29: ನಿರುದ್ಯೋಗ ಹಾಗೂ ಜಾತಿ ತಾರತಮ್ಯದ ಕುರಿತಂತೆ ಬನಸ್ಕಾಂತದ ಬುಡಕಟ್ಟು ಸಮುದಾಯದ ಯುವಕರು ಪಾಲನ್ಪುರದಿಂದ ಗಾಂಧಿನಗರದವರೆಗೆ 131 ಕಿ.ಮೀ. ಪಾದಯಾತ್ರೆ ನಡೆಸಿದ್ದಾರೆ.
ಜಾತಿ ತಾರತಮ್ಯ ನಿರಂತರವಾಗಿ ಮುಂದುವರಿದಿದೆ. ಜಾತಿ ಪ್ರಮಾಣ ಪತ್ರಗಳ ಪರಿಶೀಲನೆಯಲ್ಲಿ ವಿಳಂಬವಾಗುತ್ತಿದೆ. ಇದು ಬುಡಕಟ್ಟು ಯುವಕರನ್ನು ನಿರೋದ್ಯೋಗಕ್ಕೆ ತಳ್ಳಿದೆ ಎಂದು ಪ್ರತಿಭಟನಕಾರರು ಆರೋಪಿಸಿದ್ದಾರೆ.
ದಾಂತಾದ ಕಾಂಗ್ರೆಸ್ ಶಾಸಕ ಕಾಂತಿ ಖರಾಡಿ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡರು. ‘‘ಇದು ರಾತ್ರೋರಾತ್ರಿ ಹುಟ್ಟಿಕೊಂಡ ಪ್ರತಿಭಟನೆಯಲ್ಲ’’ ಎಂದು ಪ್ರತಿಭಟನಕಾರರೊಂದಿಗೆ ನಡೆಯುತ್ತಿದ್ದ ಸಂದರ್ಭ ಖರಾಡಿ ಹೇಳಿದರು.
ಈ ಬಿಕ್ಕಟ್ಟು ಮೂರು ನಾಲ್ಕು ವರ್ಷಗಳ ಹಿಂದಿನದು ಎಂದು ಬಣ್ಣಿಸಿದ ಬುಡಕಟ್ಟು ಸಮುದಾಯದ ನಾಯಕ ಈಶ್ವರ್ಭಾಯಿ ದಾಮೋರ್, ಪಾದಯಾತ್ರೆ ನಡೆಸುವ ಮುನ್ನ ಸಮುದಾಯ ಸಾಂವಿಧಾನಿಕವಾದ ಎಲ್ಲಾ ಪ್ರಯತ್ನಗಳನ್ನು ಮಾಡಿದೆ ಎಂದಿದ್ದಾರೆ.
‘‘ನಾವು ಮಾಮಲ್ದಾರ್, ಜಿಲ್ಲಾಧಿಕಾರಿ, ಸಚಿವರು, ಮುಖ್ಯಮಂತ್ರಿ, ಅಲ್ಲದೆ, ರಾಜ್ಯಪಾಲರಿಗೆ ಕೂಡ ಮನವಿ ಸಲ್ಲಿಸಿದ್ದೇವೆ. ಜಾತಿ ಪ್ರಮಾಣ ಪತ್ರದ ಪರಿಶೀಲನೆಗಿರುವ ಅಡೆತಡೆಯನ್ನು ನಿವಾರಿಸಬೇಕೆಂಬುದು ನಮ್ಮ ಏಕೈಕ ಬೇಡಿಕೆ’’ ಎಂದು ದಾಮೋರ್ ಹೇಳಿದ್ದಾರೆ.





