Gujarat | ಉದ್ಘಾಟನೆಗೂ ಮುನ್ನವೇ 21 ಕೋಟಿ ರೂ. ವೆಚ್ಚದ ನೀರಿನ ಟ್ಯಾಂಕ್ ಕುಸಿತ

Photo Credit : indiatoday.in
ಸೂರತ್, ಜ.19: ಗುಜರಾತ್ ನ ಸೂರತ್ ಜಿಲ್ಲೆಯಲ್ಲಿ 21 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ನೀರಿನ ಟ್ಯಾಂಕ್ ಉದ್ಘಾಟನೆಗೂ ಮುನ್ನವೇ ಕುಸಿದು ಬಿದ್ದಿರುವ ಘಟನೆ ನಡೆದಿದೆ. 33 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಗುರಿ ಹೊಂದಿದ್ದ ಯೋಜನೆಗೆ ಇದರಿಂದ ದೊಡ್ಡ ಹಿನ್ನಡೆಯಾಗಿದೆ. ಜೊತೆಗೆ, ನಿರ್ಮಾಣ ಗುಣಮಟ್ಟದ ಕುರಿತು ಗಂಭೀರ ಪ್ರಶ್ನೆಗಳು ಉದ್ಭವಿಸಿವೆ.
ರಾಜ್ಯದ ಗೇಪಗ್ಲಾ ಗ್ರೂಪ್ ನೀರು ಸರಬರಾಜು ಯೋಜನೆಯಡಿ ಗುಜರಾತ್ ನ ಮಾಂಡ್ವಿ ತಾಲ್ಲೂಕಿನ ತಡಕೇಶ್ವರ ಗ್ರಾಮದಲ್ಲಿ ಈ ಟ್ಯಾಂಕ್ ನಿರ್ಮಿಸಲಾಗಿತ್ತು. ಜ. 19ರಂದು ಪ್ರಾಯೋಗಿಕ ಚಾಲನೆ ವೇಳೆ 11 ಲಕ್ಷ ಲೀಟರ್ ಸಾಮರ್ಥ್ಯ ಹಾಗೂ ಸುಮಾರು 15 ಮೀಟರ್ ಎತ್ತರದ ಟ್ಯಾಂಕ್ಗೆ ಪರೀಕ್ಷಾರ್ಥವಾಗಿ ಸುಮಾರು 9 ಲಕ್ಷ ಲೀಟರ್ ನೀರನ್ನು ತುಂಬಲಾಗಿತ್ತು. ಮಧ್ಯಾಹ್ನದ ವೇಳೆ ಸಂಪೂರ್ಣ ರಚನೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಒಬ್ಬ ಮಹಿಳೆ ಸೇರಿದಂತೆ ಮೂವರು ಕಾರ್ಮಿಕರು ಗಾಯಗೊಂಡಿದ್ದಾರೆ. ಟ್ಯಾಂಕ್ ಇನ್ನೂ ಉದ್ಘಾಟನೆಯಾಗಿರಲಿಲ್ಲ ಹಾಗೂ ನೀರು ಸರಬರಾಜು ಜಾಲಕ್ಕೆ ಸಂಪರ್ಕ ಕಲ್ಪಿಸಿರಲಿಲ್ಲವಾದ್ದರಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.
ಘಟನೆಯ ಬಳಿಕ ಸ್ಥಳೀಯ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಸಾರ್ವಜನಿಕ ಹಣದ ಭಾರೀ ವೆಚ್ಚವಾದರೂ ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಲಾಗಿದೆ ಎಂದು ಆರೋಪಿಸಿದ್ದಾರೆ. ಸ್ಥಳ ಪರಿಶೀಲನೆಯಲ್ಲಿ ಸಿಮೆಂಟ್ ಪದರಗಳ ಸಿಪ್ಪೆ ಸುಲಿಯುತ್ತಿರುವಂತೆ ಕಂಡುಬಂದಿದ್ದು, ನಿರ್ಮಾಣದಲ್ಲಿ ಬಳಸಲಾದ ವಸ್ತುಗಳ ಗುಣಮಟ್ಟದ ಕುರಿತು ಅನುಮಾನಗಳು ವ್ಯಕ್ತವಾಗಿವೆ.
ನೀರು ಸರಬರಾಜು ಇಲಾಖೆಯ ಉಪ ಇಂಜಿನಿಯರ್ ಜಯ್ ಸೋಮಭಾಯಿ ಚೌಧರಿ, ಯೋಜನೆಯನ್ನು ಖಾಸಗಿ ಏಜೆನ್ಸಿಗೆ 21 ಕೋಟಿ ರೂ. ವೆಚ್ಚದಲ್ಲಿ ನೀಡಲಾಗಿತ್ತು ಎಂದು ತಿಳಿಸಿದ್ದಾರೆ. ಟ್ಯಾಂಕ್ ಇನ್ನೂ ತಾಂತ್ರಿಕ ಪರಿಶೀಲನೆಯ ಹಂತದಲ್ಲಿದ್ದಾಗಲೇ ಕುಸಿತ ಸಂಭವಿಸಿದೆ ಎಂದರು.
ಘಟನೆಯ ತನಿಖೆಗೆ ತಾಂತ್ರಿಕ ತಜ್ಞರ ತಂಡವನ್ನು ನಿಯೋಜಿಸಲಾಗಿದ್ದು, ವಿವರವಾದ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಯನಿರ್ವಾಹಕ ಎಂಜಿನಿಯರ್ ಜೇ ಚೌಧರಿ ಹೇಳಿದ್ದಾರೆ.
ಇತ್ತ, ಸ್ಥಳೀಯರು ಕೇವಲ ತನಿಖೆಯಷ್ಟೇ ಅಲ್ಲದೆ ಹೊಣೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. “ಮೂರು ವರ್ಷಗಳಿಂದ ಕುಡಿಯುವ ನೀರಿನ ನಿರೀಕ್ಷೆಯಲ್ಲಿದ್ದೆವು. ಮನೆಗಳಿಗೆ ನೀರು ತಲುಪುವ ಮೊದಲೇ ಟ್ಯಾಂಕ್ ಕುಸಿದಿದೆ,” ಎಂದು ತಡಕೇಶ್ವರ ಗ್ರಾಮದ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.







