Gujarat | ಕುದುರೆ ಸವಾರಿ ಮಾಡಿದ್ದಕ್ಕೆ ದಲಿತ ವರನ ಮೇಲೆ ದಾಳಿ

Photo Credit : NDTV
ಪಟನ್: ಮದುವೆ ದಿನ ಕುದುರೆ ಸವಾರಿ ಮಾಡಿದ್ದಕ್ಕೆ ದಲಿತ ವರನ ಮೇಲೆ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಗುಜರಾತಿನ ಪಟನ್ ಜಿಲ್ಲೆಯ ಚಂದ್ರುಮನಾ ಗ್ರಾಮದಲ್ಲಿ ನಡೆದಿದೆ.
ಸೋಮವಾರ ದಲಿತ ಸಮುದಾಯದ ವರ ವಿಶಾಲ ಚಾವ್ಡಾ ತನ್ನ ವಿವಾಹ ಮೆರವಣಿಗೆಯಲ್ಲಿ ಕುದುರೆಯ ಮೇಲೆ ಸಾಗುತ್ತಿದ್ದಾಗ ಪ್ರಬಲ ಸಮುದಾಯದ ಗುಂಪೊಂದು ತಡೆದಿತ್ತು. ಕೆಳಜಾತಿಯ ವರ ಕುದುರೆ ಸವಾರಿ ಮಾಡುತ್ತಿದ್ದುದು ಅವರನ್ನು ಕೆರಳಿಸಿತ್ತು.
‘ಈ ಗ್ರಾಮದಲ್ಲಿ ದಲಿತನೋರ್ವನಿಗೆ ಕುದುರೆ ಸವಾರಿ ಮಾಡಲು ಎಷ್ಟು ಧೈರ್ಯ?’ ಎಂದು ಅಬ್ಬರಿಸಿದ ಗುಂಪು ಚಾವ್ಡಾ ಮತ್ತು ಆತನ ಸಂಬಂಧಿಗಳ ಮೇಲೆ ಕತ್ತಿಗಳಿಂದ ಹಲ್ಲೆ ನಡೆಸಿದೆ.
ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೋಲಿಸರು ಗ್ರಾಮದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಹೆಚ್ಚಿನ ಬಂದೋಬಸ್ತ್ ಏರ್ಪಡಿಸಿದ್ದಾರೆ.
ಇದೊಂದು ಪ್ರತ್ಯೇಕ ಘಟನೆಯಲ್ಲ,ಇಂತಹ ಘಟನೆಗಳು ಗುಜರಾತಿನಲ್ಲಿ ನಡೆಯುತ್ತಲೇ ಇರುತ್ತವೆ. ಗಾಂಧಿನಗರದಿಂದ ಬನಾಸ್ಕಾಂತಾವರೆಗೂ ದಲಿತ ವರ ಕುದುರೆ ಸವಾರಿ ಮಾಡುವುದು ಹಿಂಸಾಚಾರಕ್ಕೆ ಕಾರಣವಾಗಿರುವ ಘಟನೆಗಳು ನಡೆದಿವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.





