ಗುಜರಾತ್ | ಸವರ್ಣೀಯ ಮಗುವನ್ನು 'ಬೇಟಾ' ಎಂದು ಕರೆದಿದ್ದಕ್ಕೆ ಹಲ್ಲೆ; ಗಂಭೀರವಾಗಿ ಗಾಯಗೊಂಡಿದ್ದ ದಲಿತ ಯುವಕ ಸಾವು
9 ಮಂದಿ ಆರೋಪಿಗಳ ಬಂಧನ

ಸಾಂದರ್ಭಿಕ ಚಿತ್ರ (PTI)
ಅಮ್ರೇಲಿ : ಗುಜರಾತ್ನ ಅಮ್ರೇಲಿ ಜಿಲ್ಲೆಯ ಪ್ರಬಲ ಜಾತಿಗೆ ಸೇರಿದ ಮಗುವನ್ನು 'ಬೇಟಾ' ಎಂದು ಕರೆದಿದ್ದಕ್ಕೆ ದಲಿತ ಯುವಕನಿಗೆ ಸವರ್ಣೀಯರ ಗುಂಪೊಂದು ಥಳಿಸಿತ್ತು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಭಾವನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅಪ್ರಾಪ್ತ ಬಾಲಕ ಸೇರಿದಂತೆ ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ನೀಲೇಶ್ ರಾಥೋಡ್ ಎಂಬ ಯುವಕ ಸಿಹಿ ತಿಂಡಿ ಖರೀದಿಸಲು ಪ್ರಬಲ ಜಾತಿಯ ವಿಜಯ್ ಆನಂದ್ ತೋಟಾ ಎಂಬಾತನ ಅಂಗಡಿಗೆ ಹೋಗಿದ್ದ. ಈ ವೇಳೆ ಅಂಗಡಿಯಲ್ಲಿ ಚಿಕ್ಕ ಮಗುವಿತ್ತು. ಆ ಮಗುವನ್ನು 'ಬೇಟಾ' (ಮಗುವೇ) ಎಂದು ನೀಲೇಶ್ ಕರೆದಿದ್ದಾರೆ. ಇದೇ ಕಾರಣಕ್ಕಾಗಿ ಅವರ ಮೇಲೆ ಅಂಗಡಿ ಮಾಲಕ ವಿಜಯ್ ಆನಂದ್ ಮತ್ತು ಇತರರು ಕೋಲುಗಳು, ಕುಡುಗೋಲುಗಳಿಂದ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನೀಲೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಘಟನೆ ಬಗ್ಗೆ ಪ್ರಶ್ನಿಸಿದ ನೀಲೇಶ್ ಚಿಕ್ಕಪ್ಪ ಸುರೇಶ್ ವಾಲಾ ಮೇಲೆ ಕೂಡ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಕುರಿತು ಸುರೇಶ್ ವಾಲಾ ಪ್ರಕರಣ ದಾಖಲಿಸಿದ್ದಾರೆ.
ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೆವಾನಿ ಅವರು ಮೃತ ನೀಲೇಶ್ ರಾಥೋಡ್ ಅವರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಅವರ ಜೊತೆ ಪ್ರತಿಭಟನೆಯಲ್ಲಿ ಭಾಗವಹಿಸಿ ನ್ಯಾಯಕ್ಕಾಗಿ ಒತ್ತಾಯಿಸಿದರು.
ಈ ಬೆಳವಣಿಗೆ ಗುಜರಾತ್ನಲ್ಲಿ ಇಂದಿಗೂ ಜಾತಿವಾದ ಆಳವಾಗಿ ಬೇರೂರಿದೆ ಎಂಬುದನ್ನು ತೋರಿಸುತ್ತದೆ. ದಲಿತರು ಭಯದಲ್ಲಿ ಬದುಕುತ್ತಿದ್ದಾರೆ ಮತ್ತು ತಮ್ಮ ಸ್ವಂತ ನೆಲದಲ್ಲಿ ಅಸುರಕ್ಷಿತರಾಗಿದ್ದಾರೆ. ದಲಿತರ ಬಗ್ಗೆ ತಾರತಮ್ಯ ಮಾಡಲಾಗುತ್ತದೆ, ಸಾಮಾನ್ಯ ಬಾವಿಗಳಿಂದ ನೀರು ತರುವುದನ್ನು ನಿರಾಕರಿಸಲಾಗುತ್ತದೆ, ದೇವಾಲಯಗಳಿಗೆ ಪ್ರವೇಶಿಸುವುದನ್ನು ತಡೆಯಲಾಗುತ್ತದೆ. ಈಗ ಓರ್ವ ದಲಿತನನ್ನು ಕ್ರೂರವಾಗಿ ಥಳಿಸಲಾಗಿದೆ. ಆದರೆ ಸರಕಾರ ಮೌನವಾಗಿದೆ. ಇದು ಅತ್ಯಂತ ದುರದೃಷ್ಟಕರ. ಈ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಆಗ್ರಹಿಸಿದರು.







